
ಉಡುಪಿ: ಜಿಲ್ಲೆಯ ಮಲ್ಪೆ ಬಂದರಿನ ಸಂಜಾತ ಅವರ ಮಾಲೀಕತ್ವದ ತವಕಲ್ ಎನ್ನುವ ಹೆಸರಿನ ಮೀನುಗಾರಿಕೆ ಬೋಟ್ ಗಂಗೊಳ್ಳಿ ಅಳಿವೆ ಸಮೀಪ ಮರದ ದಿಮ್ಮಿಗೆ ಡಿಕ್ಕಿಯಾಗಿ ಭಾಗಶಃ ಮುಳುಗಡೆಗೊಂಡು ಲಕ್ಷಾಂತರ ರುಪಾಯಿ ನಷ್ಟವಾದ ಘಟನೆ ಸಂಭವಿಸಿದೆ.
ಜ.4 ರಂದು ದುರಸ್ತಿಗೆಂದು ಮೀನುಗಾರರಾದ ರವಿ ಸಾಲ್ಯಾನ್ ಮತ್ತು ಹರೀಶ್ ಅವರು ಮಲ್ಪೆ ಬಂದರಿನಿಂದ ಗಂಗೊಳ್ಳಿಗೆ ಬೋಟ್ ಅನ್ನು ಕೊಂಡೊಯ್ಯುತ್ತಿದ್ದಾಗ ಗಂಗೊಳ್ಳಿ ಬಂದರಿನ ಅಳಿವೆಯಿಂದ ಸುಮಾರು 2 ನಾಟಿಕಲ್ ಮೈಲು ದೂರದಲ್ಲಿ ಚಲಿಸುತ್ತಿರುವ ವೇಳೆ ಭಾರೀ ಗಾತ್ರದ ಮರದ ದಿಮ್ಮಿ ತೇಲಿ ಬಂದು ಬೋಟಿಗೆ ಡಿಕ್ಕಿ ಹೊಡೆದಿದೆ. ಇದರ ಪರಿಣಾಮವಾಗಿ ಬೋಟಿನ ಮುಂಭಾಗದ ತಳಬದಿಯಲ್ಲಿ ಹಾನಿಯಾಗಿ ನೀರು ಒಳ ಬರಲಾರಂಭಿಸಿತ್ತು.
ಮಾಹಿತಿ ಪಡೆದ ಮೀನುಗಾರರು ನೀರಿನ ಒಳ ಹರಿವು ಜಾಸ್ತಿಯಾಗಿ ಬೋಟು ಮುಳುಗುವ ಸಂದರ್ಭದಲ್ಲಿ ಜಲರಾಣಿ ಎಂಬ ಹೆಸರಿನ ಬೋಟ್ ರವಾನಿಸಿ ಇಬ್ಬರನ್ನೂ ರಕ್ಷಣೆ ಮಾಡಿದ್ದಾರೆ.



















