
ಕಾರ್ಕಳ: ಇರ್ವತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷ ಭರತ್ ಜೈನ್ ಹಾಗೂ ಆತನ ಸಹೋದರ ಭವಿಷತ್ ಜೈನ್ ಸಹಿತ 10 ಮಂದಿ ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದ ವೇಳೆ ಕೆಲಸಗಾರರ ಜೊತೆ ಜಗಳ ಮಾಡಿದ್ದಲ್ಲದೆ ಅವಾಚ್ಯ ಶಬ್ದಗಳಿಂದ ಜಾತಿ ನಿಂದನೆ ಮಾಡಿ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂಬ ಆರೋಪವಿದ್ದು ಈ ಹಿನ್ನೆಲೆಯಲ್ಲಿ ಇವರ ವಿರುದ್ಧ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಡಿಸೆಂಬರ್ 30ರಂದು ಪರಿಶಿಷ್ಟ ಜಾತಿಗೆ ಸೇರಿದ ವಿಠಲ ಎಂಬವರು ಸುದರ್ಶನ್, ಜಯ ಮತ್ತು ರೋಹಿತ್ ಎಂಬವರೊಂದಿಗೆ ಇರ್ವತ್ತೂರು ಗ್ರಾಮ ಪಂಚಾಯತ್ ಕಟ್ಟಡದ ಪಕ್ಕದಲ್ಲಿರುವ ಕಟ್ಟಡದ ಕಾಂಕ್ರೀಟ್ ಕೆಲಸ ಮಾಡುತ್ತಿದ್ದ ವೇಳೆ ಅಲ್ಲಿಗೆ ಬಂದ ಇರ್ವತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷ ಭರತ್ ಜೈನ್ ಮತ್ತು ರೋಹಿತ್ ಮಧ್ಯೆ ಜಗಳ ನಡೆದಿತ್ತು.
ಈ ವೇಳೆ ಜಗಳ ಬಿಡಿಸಲು ಹೋದ ವಿಠಲ ಅವರ ಮೇಲೆಯೂ ಭರತ್ ಜೈನ್ ಹಲ್ಲೆ ಮಾಡಿದ್ದು ಬಳಿಕ ಸಂಜೆಯ ವೇಳೆ ಭರತ್ ಜೈನ್ ಹಾಗೂ ಆತನ ಸಹೋದರ ಭವಿಷತ್ ಜೈನ್ ಎಂಬವರು ಇತರ 10 ಮಂದಿಯನ್ನು ಕರೆದುಕೊಂಡು ಬಂದು ರಾಡ್ ಹಾಗೂ ಕಟ್ಟಿಗೆಯಿಂದ ಜಯ ಮತ್ತು ಸುದರ್ಶನ್ ಅವರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ, ಅವಾಚ್ಯ ಶಬ್ದಗಳಿಂದ ಜಾತಿ ನಿಂದನೆ ಮಾಡಿ ಕೊಲೆ ಬೆದರಿಕೆ ಹಾಕಿದ್ದರು.
ಹಲ್ಲೆಗೊಳಗಾದವರು ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು ವಿಠಲ ಅವರು ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಇರ್ವತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷ ಭರತ್ ಜೈನ್ ಆತನ ಸಹೋದರ ಭವಿಷತ್ ಜೈನ್ ಹಾಗೂ 10 ಮಂದಿ ವಿರುದ್ಧ ದೂರು ದಾಖಲಿಸಿದ್ದಾರೆ.











































