
ಬೆಂಗಳೂರು: ಈವರೆಗೂ ಗೃಹಲಕ್ಷ್ಮಿ ಯೋಜನೆಯ ಉಪಯೋಗವನ್ನು ಮಹಿಳೆಯರು ಮಾತ್ರ ಪಡೆಯುತ್ತಿದ್ದು ಮುಂದಿನ ತಿಂಗಳಿನಿಂದ ತೃತೀಯ ಲಿಂಗಿಗಳೂ ಪಡೆಯಬಹುದಾಗಿದೆ. ತೃತೀಯ ಲಿಂಗಿಗಳಿಗೆ ಹಣ ನೀಡಲು ಈಗಾಗಲೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಆದೇಶ ದೊರಕಿದ್ದು ಜಿಲ್ಲಾಧಿಕಾರಿಗಳು ವಿತರಣೆ ಮಾಡಿರುವ ಐಡಿ ಕಾರ್ಡ್ ನೀಡಿ ಗೃಹಲಕ್ಷ್ಮಿ ಹಣಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ.
ಈ ತಿಂಗಳ ಕೊನೆಯ ಒಳಗಾಗಿ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ಜಿಲ್ಲಾಧಿಕಾರಿಗಳಿಂದ ವಿತರಿಲ್ಪಟ್ಟ ಗುರುತಿನ ಚೀಟಿ ಇದ್ದರೆ ಬೆಂಗಳೂರು ಒನ್, ಗ್ರಾಮ ಒನ್ ಮತ್ತು ಸೈಬರ್ ಸೆಂಟರ್ಗಳಲ್ಲಿ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ಈ ತಿಂಗಳ ಒಳಗಡೆ ಅರ್ಜಿ ಸಲ್ಲಿಕೆಯಾದ್ರೆ ಮುಂದಿನ ತಿಂಗಳೇ ತೃತೀಯ ಲಿಂಗಿಗಳ ಅಕೌಂಟ್ಗೆ ಎರಡು ಸಾವಿರ ರೂಪಾಯಿ ಹಣ ಬರಲಿದೆ.
ರಾಜ್ಯದಲ್ಲಿ 40,000 ಹೆಚ್ಚು ತೃತೀಯ ಲಿಂಗಿಗಳಿದ್ದು ಅವರ ಅಭಿವೃದ್ಧಿಗೆ ಅಥವಾ ಜೀವನೋಪಾಯಕ್ಕೆ ಗೃಹಲಕ್ಷ್ಮಿ ಹಣ ಸಹಕಾರಿಯಾಗಲಿದೆ. ಈಗಾಗಲೇ 1.24 ಕೋಟಿ ಮಂದಿ ಗೃಹಲಕ್ಷ್ಮಿ ಯೋಜನೆಗೆ ನೊಂದಾಣಿ ಮಾಡಿಕೊಂಡಿದ್ದಾರೆ. ಅದರಲ್ಲಿ 1.25 ಕೋಟಿ ಮಂದಿ 2 ಸಾವಿರ ರೂಪಾಯಿ ಹಣ ಪಡೆಯುತ್ತಿದ್ದು 1.5 ಲಕ್ಷ ಮಂದಿ ಜಿಎಸ್ಟಿ ಮತ್ತು ಆದಾಯ ತೆರಿಗೆ ಪಾವತಿ ದಾರರಾಗಿದ್ದು ಅವರಿಗೆ ಹಣ ಸಂದಾಯ ಸ್ಥಗಿತ ಮಾಡಲಾಗಿದೆ. ಜೊತೆಗೆ ಮೇ ತಿಂಗಳವರೆಗೂ ಹಣ ಸಂದಾಯ ಆಗಿದ್ದು ಜೂನ್ ತಿಂಗಳ ಹಣ ವರ್ಗಾವಣೆಯಾಗಬೇಕಿದೆ.





















































































