
ಬೆಂಗಳೂರು: ದಿನೇ ದಿನೇ ಅರಣ್ಯ ಅಪರಾಧಗಳು ಹೆಚ್ಚುತ್ತಿದ್ದು ಆಧುನಿಕತೆಗೆ ಅನುಗುಣವಾಗಿ ಅರಣ್ಯ ಇಲಾಖೆಯು ಬದಲಾಗಿ ಇದೀಗ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ವಿಧಾನಸೌಧದಲ್ಲಿ ಡಿಜಿಟಲ್ ಎಫ್ಐಆರ್ ವ್ಯವಸ್ಥೆಗೆ ಚಾಲನೆ ನೀಡಿದ್ದಾರೆ.
ಈ ವೇಳೆ ಮಾತನಾಡಿದ ಅವರು ಒತ್ತುವರಿ, ಅಕ್ರಮ ಮರ ಕಡಿತ, ಕಳ್ಳಬೇಟೆ, ಅತಿಕ್ರಮ ಪ್ರವೇಶ ಸೇರಿ ಇತ್ಯಾದಿ ಅರಣ್ಯ ಅಪರಾಧಗಳಿಗೆ ಇನ್ನು ಮುಂದೆ ‘ಗರುಡಾಕ್ಷಿ’ ಅಸ್ತ ಪ್ರಯೋಗಿಸಲಾಗುವುದು. ದಿನೇ ದಿನೇ ಅರಣ್ಯ ಅಪರಾಧಗಳು ಹೆಚ್ಚಾಗುತ್ತಿವೆ. ಅರಣ್ಯ ಅಪರಾಧಗಳನ್ನು ತಡೆಯಲು, ತಪ್ಪಿತಸ್ಥರಿಗೆ ಶಿಕ್ಷೆಯಾಗುವುದನ್ನು ಖಾತ್ರಿಪಡಿಸುವ ನಿಟ್ಟಿನಲ್ಲಿ ಅನ್ಲೈನ್ ಎಫ್ಐಆರ್ ವ್ಯವಸ್ಥೆ ಜಾರಿಗೆ ತರಲಾಗಿದೆ. ಅರಣ್ಯ ಸಚಿವರಾದ ಬಳಿಕ ಇಲಾಖೆಯಲ್ಲಿ ಹಂತ ಹಂತವಾಗಿ ಸುಧಾರಣೆ ತರಲಾಗುತ್ತಿದ್ದು, ಪೊಲೀಸ್ ಇಲಾಖೆಯ ಮಾದರಿಯಲ್ಲೇ ಅರಣ್ಯ ಇಲಾಖೆಯಲ್ಲೂ ಗರುಡಾಕ್ಷಿ ಹೆಸರಿನಲ್ಲಿ ಆನ್ಲೈನ್ ಎಫ್ಐಆರ್ ವ್ಯವಸ್ಥೆ ಕಾರ್ಯರೂಪಕ್ಕೆ ತರಲಾಗುತ್ತಿದೆ.
ಗರುಡಾಕ್ಷಿ ಆನ್ಲೈನ್ ಎಫ್ಐಆರ್ ವ್ಯವಸ್ಥೆ ಅರಣ್ಯ ಮತ್ತು ವನ್ಯಜೀವಿ ಅಪರಾಧಗಳ ನಿರ್ವಹಣೆಯಲ್ಲಿ ಅತ್ಯಂತ ಮಹತ್ವದ ಮೈಲಿಗಲ್ಲಾಗಿದ್ದು, ಪಾರದರ್ಶಕ, ಸುವ್ಯವಸ್ಥಿತ, ಪರಿಹಾರವಾಗಿ ಅರಣ್ಯ, ಅಪರಾಧ ತಡೆಯಲು ಇಲಾಖೆಗೆ ಬಲ ತುಂಬುತ್ತದೆ. ಆನ್ಲೈನ್ ಎಫ್ಐಆರ್ ವ್ಯವಸ್ಥೆಯಿಂದ ಎಷ್ಟು ಪ್ರಕರಣದಲ್ಲಿ ಆರೋಪಪಟ್ಟಿ ಸಲ್ಲಿಸಲಾಗುತ್ತದೆ ಎಂಬ ಮಾಹಿತಿ ಲಭ್ಯವಾಗಲಿದೆ. ಅಲ್ಲದೇ, ಇಲಾಖೆಯ ಇಲಾಖೆಯ ಅಧಿಕಾರಿಗಳು ಕುಳಿತ ಜಾಗದಿಂದಲೇ ಎಲ್ಲ ವಲಯಗಳ ಅರಣ್ಯ ಅಪರಾಧ ಪ್ರಕರಣಗಳ ಬಗ್ಗೆ ನಿಗಾವಹಿಸಬಹುದಾಗಿದೆ ಎಂದು ಆನ್ಲೈನ್ ಎಫ್ಐಆರ್ ನ ಪ್ರಯೋಜನಗಳ ಕುರಿತು ಮಾಹಿತಿ ನೀಡಿದರು.



















