ಟವರ್ ನಿರ್ಮಾಣ ಕಾಮಗಾರಿ ಸ್ಥಗಿತಗೊಳಿಸಲು ಉಸ್ತುವಾರಿ ಸಚಿವರ ಆದೇಶ

ನಂದಿಕೂರಿನಿಂದ ಇನ್ನಾ ಮಾರ್ಗವಾಗಿ ದಕ್ಷಿಣನ ಕನ್ನಡ ಜಿಲ್ಲೆಯ ವಿವಿಧ ಭಾಗಗಳ ಕೃಷಿ ಭೂಮಿಯ ಮೇಲಿಂದ ಕೇರಳದ ಕಾಸರಗೋಡಿಗೆ ಹಾದು ಹೋಗಲಿರುವ ೪೦೦ ಕೆ.ವಿ. ಸಾಮರ್ಥ್ಯದ ವಿದ್ಯುತ್ ಫೀಡರ್ ಆಳವಡಿಕೆಯ ಯೋಜನೆಯ ಬಗ್ಗೆ ವಿರೋದ ಸಮಿತಿಯ ನೇತೃತ್ವದಲ್ಲಿ ಬ್ರಹತ್ ಪ್ರತಿಭಟನೆ ಬುಧವಾರ ಇನ್ನಾ ಗ್ರಾಮ ಪಂಚಾಯತ್ ವಠಾರದಲ್ಲಿ ನಡೆಯಿತು.
ಸಂಜೆ ಪ್ರತಿಭಟನ ಸ್ಥಳಕ್ಕಾಗಮಿಸಿದ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪ್ರತಿಭಟನಾಕಾರರ ಮನವಿ ಸ್ವೀಕರಿಸಿ ತನ್ನ ಮುಂದಿನ ಆದೇಶದವರೆಗೆ ತಾತ್ಕಾಲಿಕವಾಗಿ ಕಾಮಗಾರಿ ಸ್ಥಗಿತಗೊಳಿಸುವಂತೆ ಜಿಲ್ಲಾಧಿಕಾರಿಗಳಿಗೆ ಹಾಗೂ ಕಾರ್ಕಳ ತಹಶೀಲ್ದಾರರಿಗೆ ತಿಳಿಸಿದರು.
ಕೃಷಿಕರ ಬದುಕಿನೊಡನೆ ಚೆಲ್ಲಾಟ ಬೇಡ: ಹೆಬ್ಬಾಳ್ಕರ್
ಈ ದೇಶದ ಜನರು ರೈತರನ್ನು ನಂಬಿ ಬದುಕುವವರು ಹೀಗಾಗಿ ಅವರನ್ನು ಬದುಕಲು ಬಿಡಿ, ಜನ ವಿರೋದ ಯೋಜನೆಗಳಿಗೆ ಯಾವತ್ತೂ ಬೆಂಬಲ ಇಲ್ಲ ಎಂದ ಉಸ್ತುವಾರಿ ಸಚಿವರು ಅತೀ ಶೀಘ್ರ ರಾಜ್ಯದ ಇಂಧನ ಸಚಿವ ಕೆ.ಜೆ.ಜಾರ್ಜ್ ಜತೆ ಮಾತುಕತೆ ನಡೆಸಿ ಪರಿಸ್ಥಿತಿ ಪರಿಶೀಲಿಸಿ ಕೃಷಿಕರಿಗೆ ತೊಂದರೆಯಾಗುವುದಾದರೆ ಖಂಡಿತಾ ಕೃಷಿಕರ ಪರವಾಗಿ ನಿಲ್ಲುವುದಾಗಿ ತಿಳಿಸಿದರು.
ಉಡುಪಿ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ, ಕಾರ್ಕಳ ತಹಶೀಲ್ದಾರ್ ನರಸಪ್ಪರವರಿಗೂ ಮನವಿ ನೀಡಲಾಯಿತು.
ಸಾವಿರಕ್ಕೂ ಮಿಕ್ಕಿ ಪ್ರತಿಭಟನಾಕಾರರು ಪಾಲ್ಗೊಂಡಿದ್ದ ಸಭೆಯಲ್ಲಿ ದಕ್ಷಿಣ ಕನ್ನಡ ಉಡುಪಿ ಜಿಲ್ಲೆಗಳ ಬಾರತೀಯ ಕಿಸಾನ್ ಸಂಘದ ನಾಯಕರು, ಹಸಿರು ಸೇನೆಯ ನಾಯಕರು, ಶಾಸಕ ವಿ. ಸುನಿಲ್ ಕುಮಾರ್, ಸಂಸದರಾದಿಯಾಗಿ ಮಾಜಿ ಸಚಿವರು, ವಿವಿಧ ಜನಪ್ರತಿನಿಧಿಗಳು, ವಿವಿಧ ಪಕ್ಷಗಳ ಮುಖಂಡರು, ಕಾರ್ಯಕರ್ತರು, ಕೃಷಿಕರು, ಸಾರ್ವಜನಿಕರು ಭಾಗವಹಿಸಿದ್ದರು.
ಕಾರ್ಕಳ ಶಾಸಕ ವಿ.ಸುನಿಲ್ ಕುಮಾರ್ ಮಾತನಾಡಿ, ಈ ಯೋಜನೆಯ ಬಗ್ಗೆ ಹಿಂದಿನಿಂದಲೂ ಜನರ ಪರವಾಗಿದ್ದು ಕೆಪಿಟಿಸಿಎಲ್ ನ ಅಧಿಕಾರಿಗಳ ಜತೆ ಮಾತುಕತೆ ನಡೆಸಿದ್ದೆ, ಮುಂದೆ ಈ ಯೋಜನೆ ಬೇಡವೆಂದಾದರೆ ಜನರ ಪರವಾಗಿರುವೆ ಎಂದರು.ಮಾಜಿ ಸಚಿವ ವಿನಯ ಕುಮಾರ ಸೊರಕೆ ಮಾತನಾಡಿ, ಈ ಹಿಂದೆಯೂ ಇನ್ನಾ ಭಾಗದಲ್ಲಿ ಜನವಿರೋಧಿ ಯೋಜನೆಗಳಿಗೆ ಜನರ ಪರವಾಗಿ ನಿಂತು ಕೆಲಸ ಮಾಡಿದ್ದು ಮುಂದಿನ ದಿನಗಳಲ್ಲಿಯೂ ಇನ್ನಾದ ಕೃಷಿಕರ ಪರವಾಗಿ ನಿಲ್ಲುವುದಾಗಿ ತಿಳಿಸಿದರು.ನಂದಳಿಕೆ ಟೋಲ್‌ಗೇಟ್ ಹೋರಾಟ ಸಮಿತಿಯ ಆಧ್ಯಕ್ಷ ಸುಹಾಸ್ ಹೆಗ್ಡೆ ಮಾತನಾಡಿ, ಈ ಪ್ರತಿಭಟನೆಯಲ್ಲಿ ರಾಜಕೀಯ ಎಂಬ ಚಪ್ಪಲಿ ಹೊರಗಿಟ್ಟು ಬನ್ನಿ, ಒಗ್ಗಟ್ಟಿನ ಮೂಲಕ ಈ ಪ್ರತಿಭಟನೆ ನಡೆಯಲಿ ಎಂದರು.
ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಇನ್ನಾ ಗ್ರಾಮ ಪಂಚಾಯತ್ ಅಧ್ಯಕ್ಷೆ ಸರಿತಾ ಶೆಟ್ಟಿ , ರೇಷ್ಮಾ ಶೆಟ್ಟಿ, ಪ್ರೇಮಾನಂದ ದೇವಾಡಿಗ, ದೀಪಕ್ ಕೋಟ್ಯಾನ್, ಹೋರಾಟ ಸಮಿತಿಯ ಅಧ್ಯಕ್ಷ ಅಮರನಾಥ ಶೆಟ್ಟಿ, ಪ್ರವೀಣ್ ಶೆಟ್ಟಿ, ಇನ್ನದಗುತ್ತು ಶಂಕರ ಶೆಟ್ಟಿ, ಜಯ ಎಸ್.ಕೋಟ್ಯಾನ್, ನವೀನ್ ನಾಯಕ್, ಪಡುಬಿದ್ರಿ ನವೀನಚಂದ್ರ ಶೆಟ್ಟಿ, ಪಲಿಮಾರು ನವೀನ ಚಂದ್ರ ಸುವರ್ಣ, ಸದಾಶಿವ ದೇವಾಡಿಗ, ಬೋಳ ಸತೀಶ್ ಪೂಜಾರಿ, ಜಯರಾಮ ಸಾಲ್ಯಾನ್, ಸುಭೋಧ ಶೆಟ್ಟಿ, ಕೋರಿಬೆಟ್ಟುಗುತ್ತು ಸುರೇಂದ್ರ ಶೆಟ್ಟಿ, ಲಕ್ಷಣ್ ಶೆಟ್ಟಿ ನಂದಿಕೂರು, ಮುಲ್ಲಡ್ಕಪರಾರಿ ರವೀಂದ್ರ ಶೆಟ್ಟಿ, ಸತ್ಯಶಂಕರ ಶೆಟ್ಟಿ, ಸಂದೀಪ್ ಶೆಟ್ಟಿ, ದಿನೇಶ್ ಕೋಟ್ಯಾನ್, ಏಳಿಂಜೆ ಕೌಶಲ್ಯ ಶೆಟ್ಟಿ, ಸುಧಾಕರ ಸಾಲ್ಯಾನ್, ಸುಖೇಶ್ ಶೆಟ್ಟಿ, ಉಡುಪಿ ಜಿಲ್ಲಾ ಕಿಸಾನ್ ಸಂಘದ ಶಶಿಧರ ಶೆಟ್ಟಿ, ಭಾಕಿಸಂನ ನವೀನಚಂದ್ರ ಜೈನ್, ಗೋವಿಂದರಾಜ ಭಟ್, ಶಂಕರ ಶೆಟ್ಟಿ, ಮುಂಡ್ಕೂರು ವಾದಿರಾಜ ಶೆಟ್ಟಿ, ಸಿಲ್ವೆಸ್ಟರ್ ಡಿಮೆಲ್ಲೋ, ಸೂರ್ಯಕಾಂತ ಶೆಟ್ಟಿ, ದೇವೇಂದ್ರ ಶೆಟ್ಟಿ, ಸರ್ವಜ್ನ ತಂತ್ರಿ, ದೀಪಕ್ ಕಾಮತ್ ಮತ್ತಿತರರಿದ್ದರು.
ರೈತ ಸಂಘದ ದಂಡು
ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಮತ್ತಿನ್ನಿತರ ಕಡೆಗಳಿಂದ ರೈತ ಸಂಘಗಳ ಪ್ರಮುಖರು, ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಪ್ರತಿಭಟನಾಕಾರರಿಗೆ ಪ್ರೇರಣೆ ನೀಡಿದರು. ದಕ್ಷಿಣ ಕನ್ನಡ ಜಿಲ್ಲೆಯ ಕಿಸಾನ್ ಸಂಘದ ಅಧ್ಯಕ್ಷ ಶ್ರೀಧರ ಶೆಟ್ಟಿ, ಮನೋಹರ್ ಶೆಟ್ಟಿ, ರಾಜು ಗೌಡ ರೈತರ ಪರವಾಗಿ ಮಾತನಾಡಿದರು.
ಹೋರಾಟ ಸಮಿತಿಯ ಕಾಯರದರ್ಶಿ ಚಂದ್ರಹಾಸ ಶೆಟ್ಟಿ ಪ್ರಸ್ತಾವಿಸಿ, ಸ್ವಾಗತಿಸಿ,ವಂದಿಸಿ ಇಡೀ ದಿನ ಕಾರ್ಯಕ್ರಮ ನಿರೂಪಿಸಿ ಯೋಜನೆಯಿಂದಾಗುವ ತೊಂದರೆಗಳನ್ನು ಸಾರ್ವಜನಿಕರಿಗೆ , ಅಧಿಕಾರಿಗಳಿಗೆ ಜನಪ್ರತಿನಿಧಿಗಳಿಗೆಮನವರಿಕೆ ಮಾಡಿದರು.
ಇನ್ನಾದಲ್ಲಿ ತುಂಬಿದ ಪೊಲೀಸರ ದಂಡು
ಪ್ರತಿಭಟನೆಯ ಸಂದರ್ಭ ಅಹಿತಕರ ಘಟನೆ ನಡೆಯದಂತೆ ಪೊಲೀಸರ ದಂಡು ಇನ್ನಾವನ್ನು ಸುತ್ತುವರಿದಿತ್ತು. ಉಡುಪಿ ಜಿಲ್ಲಾ ಎಸ್‌ಪಿ ಅರುಣ್, ಡಿವೈಎಸ್‌ಪಿ ಆರವಿಂದ ಕುಲಗಚ್ಚಿ, ಕಾಪು ವೃತ್ತ ನಿರೀಕ್ಷಕಿ ಜಯಶ್ರೀ ಮಾನೆ, ಪಡುಬಿದ್ರಿ ಎಸ್‌ಐ ಪ್ರಸನ್ನ ಸಹಿತ ನೂರಾರು ಪೊಲೀಸರಿದ್ದರು.
ಬೆಳಗ್ಗಿನಿಂದ ಚಹಾ, ಊಟೋಚಾರದ ವ್ಯವಸ್ಥೆ
ಇಡೀ ದಿನ ಇದ್ದ ಸಹಸ್ರಾರು ಮಂದಿಗೆ ಬೆಳಗ್ಗಿನಿಂದ ಚಹಾ,ತಿಂಡಿ, ಊಟದ ವ್ಯವಸ್ಥೆ ಕಲ್ಪಿಸಲಾಗಿತ್ತು.
ಸದ್ಯ ನ್ಯಾಯಾಲಯದ ತಡೆಯಜ್ಞೆ ಇದೆ
ಕಳೆದ 22ರಂದು ಟವರ್ ನಿರ್ಮಾಣಕ್ಕೆ ಬಂದಿದ್ದ ಕಂಪನಿಯವರನ್ನು ನೋಟೀಸ್ ನೀಡಿಲ್ಲ ಎಂಬ ಕಾರಣಕ್ಕಾಗಿ ಗ್ರಾಮಸ್ಥರು ಹಿಂದೆ ಕಳುಹಿಸಿದ್ದು 29 ರಂದು ನೋಟೀಸ್ ನೀಡಿ ಪೊಲೀಸ್ ಬಂದೋಬಸ್ತ್ ಜತೆ ಮತ್ತೆ ತಹಶೀಲ್ದಾರರ ಮುತುವಜಿರಯಲ್ಲಿ ಕಾಮಗಾರಿ ಪ್ರಾರಂಭಿಸಲಾಗಿತ್ತು. ಈ ಬಗ್ಗೆ ಎಚ್ಚೆತ್ತ ಗ್ರಾಮಸ್ಥರು ಕಾರ್ಕಳ ನ್ಯಾಯಲಯದ ಮೂಲಕ ತಡೆಯಾಜ್ಞೆ ತಂದಿದ್ದರು.ಇದೀಗ ಬುಧವಾರದ ಪ್ರತಿಭಟನೆ ಪ್ರಕ್ರಿಯೆ ಮೂಲಕ ಇನ್ನಾದ ಕೃಷಿಕರಿಗೆ ಸಂಭ್ರಮ ತಂದಿದೆ.