
ಬೆಂಗಳೂರು: ಖಾಸಗಿ ಕಾಲೇಜುಗಳ ಒಕ್ಕೂಟವು ಸಿಇಟಿ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಈ ವರ್ಷ ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿನ ಸರ್ಕಾರಿ ಕೋಟಾ ಹಾಗೂ ಕಾಮೆಡ್-ಕೆ ಕೋಟಾ ಸೀಟುಗಳ ಪ್ರವೇಶ ಶುಲ್ಕ 10-15 % ಏರಿಕೆ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಿದೆ.
ಸಿಇಟಿ ಪರೀಕ್ಷೆ ಬರೆದು ಉತ್ತಮ ರ‍್ಯಾಂಕ್ ಪಡೆದ ವಿದ್ಯಾರ್ಥಿಗಳು ಸರ್ಕಾರಿ ಕೋಟಾದಲ್ಲಿ ಸೀಟು ಪಡೆಯಲು ಮುಂದಾಗಿದ್ದು ಅತಿ ಬೇಡಿಕೆಯ ಬ್ರ್ಯಾಂಚ್ ಸೇರುವ ಪ್ಲಾನ್ ಮಾಡಿಕೊಂಡಿದ್ದಾರೆ. ಆದರೆ ಉತ್ತಮ ರ‍್ಯಾಂಕ್ ಬಾರದ ವಿದ್ಯಾರ್ಥಿಗಳು ಖಾಸಗಿ ಸೀಟ್ ಕೋಟಾದಡಿ ಖಾಸಗಿ ಇಂಜನಿಯರಿಂಗ್ ಪ್ರವೇಶಾತಿಗೆ ಮುಂದಾಗಿದ್ದಾರೆ. ಈಗ ಈ ವಿದ್ಯಾರ್ಥಿಗಳಿಗೆ ಖಾಸಗಿ ಕಾಲೇಜುಗಳು 20% ರಿಂದ 30 % ಶುಲ್ಕ ಸುಲಿಗೆ ಮಾಡಲು ಮುಂದಾಗಿವೆ. ಬೆಂಗಳೂರಿನ ಪ್ರತಿಷ್ಠಿತ ಇಂಜನಿಯರಿಂಗ್ ಕಾಲೇಜಿನಲ್ಲಿ ಸೀಟ್ ಪಡೆಯಲು 6 ರಿಂದ 10 ಲಕ್ಷ ಶುಲ್ಕ ಕಟ್ಟಬೇಕಾದ ಸ್ಥಿತಿ ಪೋಷಕರಿಗೆ ಬಂದಿದೆ. ಇದರ ನಡುವೆಯೂ ಈ ವರ್ಷ ಇಂಜಿನಿಯರಿಂಗ್ ಶುಲ್ಕ 10-15% ಏರಿಕೆಗೆ ಖಾಸಗಿ ಕಾಲೇಜುಗಳ ಸಂಘಟನೆಯಿಂದ ಸರ್ಕಾರಕ್ಕೆ ಒತ್ತಾಯ ಕೇಳಿ ಬಂದಿರುವುದು ಪೋಷಕರಲ್ಲಿ ಆತಂಕ ಸೃಷ್ಟಿ ಮಾಡಿದೆ.
ಈ ಬಗ್ಗೆ ಉನ್ನತ್ತ ಶಿಕ್ಷಣ ಸಚಿವರಾದ ಎಂ ಸಿ ಸುಧಾಕರ್ ಪ್ರತಿಕ್ರಿಯಿಸಿ ನಮ್ಮಲ್ಲಿ ಶುಲ್ಕ ನಿಯಂತ್ರಣ ಸಮಿತಿ ಇಲ್ಲ. ಹೀಗಾಗಿ ಈ ಸಮಸ್ಯೆ ಇದೆ. ಇನ್ನು ಈ ವರ್ಷ ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿನ ಸರ್ಕಾರಿ ಕೋಟಾ ಹಾಗೂ ಕಾಮೆಡ್-ಕೆ ಕೋಟಾ ಸೀಟುಗಳ ಪ್ರವೇಶ ಶುಲ್ಕ 10-15 % ಏರಿಕೆಗೆ ಖಾಸಗಿ ಕಾಲೇಜುಗಳ ಒಕ್ಕೂಟ ಒತ್ತಾಯ ಮಾಡಿದೆ. ಚರ್ಚೆ ಮಾಡ್ತೀವಿ ಎಂದು ತಿಳಿಸಿದ್ದಾರೆ.
ಉನ್ನತ್ತ ಶಿಕ್ಷಣ ಪಡೆಯುವ ಕೋರ್ಸ್ ಗಳಿಗೆ ಶುಲ್ಕ ಏರಿಸಿದ್ರೆ ಉನ್ನತ್ತ ಶಿಕ್ಷಣ ಪಡೆಯವುದಕ್ಕೆ ಮತ್ತಷ್ಟು ಕೊಕ್ಕೆ ಬೀಳುವ ಸಾಧ್ಯತೆ ಇದೆ. ಹೀಗಾಗಿ ಸರ್ಕಾರ ಎಚ್ಚೆತ್ತು ಶುಲ್ಕ ಏರಿಕೆಯ ಪ್ರಸ್ತಾವನೆಯ ಕೈಬಿಟ್ಟು ಖಾಸಗಿ ಕಾಲೇಜುಗಳಿಗೂ ಕಡಿವಾಣ ಹಾಕಿದರೆ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಸ್ವಲ್ಪ ನಿರಾಳವಾಗಬಹುದು.