
ಕೋಲ್ಕತ್ತಾ: ಆಸ್ಟ್ರೇಲಿಯಾದಿಂದ ಭಾರತಕ್ಕೆ ಪ್ರಯಾಣಿಸಿದ್ದ ಎರಡೂವರೆ ವರ್ಷದ ಹೆಣ್ಣುಮಗುವಿನಲ್ಲಿ H5N1 ಹಕ್ಕಿ ಜ್ವರ (H5N1 Bird Flu) ಕಾಣಿಸಿಕೊಂಡಿದೆ. ಶುಕ್ರವಾರ ಭಾರತಕ್ಕೆ ಪ್ರಯಾಣಿಸಿದ್ದ ಮಗುವಿನಲ್ಲಿ ಹಕ್ಕಿ ಜ್ವರ ಪತ್ತೆಯಾಗಿದ್ದು, ಆಸ್ಟ್ರೇಲಿಯಾದಲ್ಲಿ ತೀವ್ರ ನಿಗಾ ಘಟಕ ಚಿಕಿತ್ಸೆಯ ಅಗತ್ಯತೆಗಳ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ.
ಅಲ್ಲದೇ ಏವಿಯನ್ ಇನ್ ಫ್ಲುಯೆಂಜಾ (H5N1) ವೈರಸ್‌ನಿಂದ ಮಾನವನಲ್ಲಿ ಉಂಟಾದ ಮೊದಲ ಸೋಂಕು ಇದಾಗಿದ್ದು, ಸಾರ್ವಜನಿಕರಲ್ಲಿ ಆತಂಕ ಮನೆಮಾಡಿದೆ. ಈ ನಡುವೆ ಪಕ್ಷಗಳಿಂದ ಉಂಟಾಗುವ ಈ ವೈರಸ್ ಮಾನವರಿಗೆ ತರುವ ಅಪಾಯಗಳು ಕಡಿಮೆ. ಹಾಗಾಗಿ ಜನರು ಆತಂಕಕ್ಕೆ ಒಳಗಾಗಬೇಕಾಗಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ಮಗುವಿನ ಪ್ರಯಾಣ ಹಿನ್ನೆಲೆ ಹೀಗಿದೆ
ಕಳೆದ ಫೆಬ್ರವರಿ 12 ರಿಂದ 29ರ ವರೆಗೆ ಕೋಲ್ಕತ್ತಾದಲ್ಲಿ ಮಗು ಪ್ರಯಾಣಿಸಿತ್ತು. ಈ ವೇಳೆ ಯಾವುದೇ ಅನಾರೋಗ್ಯ ಇರಲಿಲ್ಲ. ಮಾರ್ಚ್ 1ರಂದು ಆಸ್ಟ್ರೇಲಿಯಾಕ್ಕೆ ತೆರಳಿದ್ದ ಮರುದಿನವೇ ಇಲ್ಲಿನ ಆಗ್ನೇಯ ವಿಕ್ಟೋರಿಯಾದ ಆಸ್ಪತ್ರೆಗೆ ದಾಖಲಿಸಲಾಯಿತು. ಮಗುವಿನ ಆರೋಗ್ಯ ಹದಗೆಡುತ್ತಿದ್ದ ಕಾರಣ ಮಾರ್ಚ್ 4ರಿಂದ ಒಂದು ವಾರಗಳ ವರೆಗೆ ಮೆಲ್ಬೋರ್ನ್‌ನ ತೀವ್ರ ನಿಗಾಘಟಕದಲ್ಲಿ ಇರಿಸಲಾಗಿತ್ತು. ಎರಡು ವಾರಗಳಲ್ಲಿ ಪೂರ್ಣ ಚಿಕಿತ್ಸೆ ಪಡೆದ ಬಳಿಕ ಆಸ್ಪತ್ರೆಯಿಂದ ಮಗುವನ್ನು ಡಿಸ್ಚಾರ್ಜ್ ಮಾಡಲಾಗಿತ್ತು. ಈ ವೇಳೆ ಮಗುವಿಗೆ ಹೆಚ್5ಎನ್1 ಗೆ ಪರೀಕ್ಷೆ ನಡಲಾಗಿತ್ತು. ಏಪ್ರಿಲ್‌ನಲ್ಲಿ ಮಗುವಿನ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು.
ಇದೀಗ ಮಗುವಿನ ಪರೀಕ್ಷಾ ವರದಿ ಪಾಸಿಟಿವ್ ಬಂದಿದೆ, ಆದ್ರೆ ಮಗು ಆರೋಗ್ಯವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.ಈ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾ ಮತ್ತು ಭಾರತದಲ್ಲಿರುವ ಮಗುವಿನ ಕುಟುಂಬಸ್ಥರಿಗೂ ಪರೀಕ್ಷೆ ನಡೆಸಲಾಗಿದ್ದು, ಅವರಿಗೆ ಸೂಂಕು ದೃಢಪಟ್ಟಿಲ್ಲ ಎಂದು ವೈದ್ಯರು ಹೇಳಿದ್ದಾರೆ.ಏನಿದು ಹಕ್ಕಿ ಜ್ವರ?ಏವಿಯನ್ ಇನ್ ಫ್ಲುಯೆಂಜಾ ಎಂದು ಕರೆಯಲಾಗುವ ಬರ್ಡ್ ಫ್ಲೂ ಅಥವಾ ಹಕ್ಕಿ ಜ್ವರ ಮೂಲಭೂತವಾಗಿ ಪಕ್ಷಿಗಳ (ಕೋಳಿ, ಬಾತುಕೋಳಿ ಇತ್ಯಾದಿ) ಮೇಲೆ ಪರಿಣಾಮ ಬೀರುವ ಒಂದು ವೈರಾಣು ಸೋಂಕು. ಆದರೆ ಇದು ಮನುಷ್ಯರಿಗೂ ಸಹ ತಗುಲುತ್ತದೆ. ಹಕ್ಕಿಜ್ವರದಲ್ಲಿ H5N1, H7N9, H5N6 ಮತ್ತು H5N8 ಎಂಬ ನಾಲ್ಕು ಮಾದರಿಗಳಿವೆ.H5N1, H7N9, H5N6 ಮಾದರಿಯ ಹಕ್ಕಿ ಜ್ವರ ವೈರಸ್ ವಿಶ್ವದ ಹಲವು ದೇಶಗಳಲ್ಲಿ ಕಂಡುಬಂದಿದ್ದು, ಇದರಿಂದಾಗಿ ಸಾವಿರಾರು ಮಂದಿ ಸಾವನ್ನಪ್ಪಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ H5N1 ಸಾಮಾನ್ಯ ಮಾದರಿಯ ಹಕ್ಕಿ ಜ್ವರವಾಗಿದೆ. ಇದು ಮನುಷ್ಯರಲ್ಲಿ 1997ರಲ್ಲಿ ಪತ್ತೆ ಮಾಡಲಾಗಿದ್ದು, ಇದು ಪೀಡಿತರಲ್ಲಿ ಶೇ.60ರಷ್ಟು ಮಂದಿಯ ಪ್ರಾಣಕ್ಕೆ ಹಾನಿ ಉಂಟು ಮಾಡಿದೆ. ಹಕ್ಕಿಗಳಿಗೆ ಇದು ತುಂಬಾ ಮಾರಣಾಂತಿಕ ವೈರಸ್ ಆಗಿದ್ದು, ಮನುಷ್ಯರು ಹಾಗೂ ಪ್ರಾಣಿಗಳಿಗೆ ಕೂಡ ಇದು ಸುಲಭವಾಗಿ ಹಬ್ಬುತ್ತದೆ.
ರೋಗ ಲಕ್ಷಣಗಳೇನು?
ಕೆಮ್ಮು, ಉಸಿರಾಟದಲ್ಲಿ ತೊಂದರೆ, ತೀವ್ರ ಜ್ವರ, ತಲೆನೋವು, ಸ್ನಾಯುಗಳ ನೋವು, ಮೂಗು ಸೋರುವಿಕೆ, ಗಂಟಲಿನ ಊತ, ಮೂಗು ಮತ್ತು ಒಸಡಿನಿಂದ ರಕ್ತ ಸೋರುವಿಕೆ.