
ನವದೆಹಲಿ: ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಮಣಿಪುರ ಗಲಭೆಯನ್ನು ತಿಳಿಗೊಳಿಸಲು ಕೇಂದ್ರ ಸರ್ಕಾರ ಆದ್ಯತೆಯ ಮೇರೆಗೆ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಿದ್ದು ಅವರ ಹೇಳಿಕೆಯನ್ನು ಪ್ರಧಾನಿ ಮೋದಿ ಗಂಭೀರವಾಗಿ ಪರಿಗಣಿಸಬೇಕು ಎಂದು ಪ್ರತಿಪಕ್ಷಗಳ ನಾಯಕರು ಆಗ್ರಹಿಸಿದ್ದಾರೆ.
ಕಾಂಗ್ರೆಸ್ ಕಾರ್ಯದರ್ಶಿ ಜೈರಾಂ ರಮೇಶ್ ಟ್ವೀಟ್ ಮಾಡಿ ‘ಸ್ವತಃ ಮೋದಿಯ ಆತ್ಮಸಾಕ್ಷಿ ಹಾಗೂ ಮಣಿಪುರದ ಜನತೆಯ ಒತ್ತಾಸೆಯಿದ್ದರೂ ಮಣಿಪುರಕ್ಕೆ ಹೋಗದ ಪ್ರಧಾನಿ ಭಾಗವತ್ ಹೇಳಿದ ಮೇಲೆ ಹೋಗುವರೇ’ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
ಈ ಕುರಿತು ಹಿರಿಯ ನಾಯಕ ಕಪಿಲ್ ಸಿಬಲ್ ‘ಮೋದಿಯ ಡಿಎನ್‌ಎನಲ್ಲಿ ಪ್ರತಿಪಕ್ಷಗಳ ನಾಯಕರ ಮಾತುಗಳನ್ನು ಕೇಳುವ ವ್ಯವಧಾನವಿಲ್ಲ. ಕನಿಷ್ಠ ಆರ್‌ಎಸ್‌ಎಸ್ ಮುಖ್ಯಸ್ಥರ ಸಲಹೆಯನ್ನಾದರೂ ಕೇಳಲಿ’ ಎಂದು ತಿಳಿಸಿದ್ದು ಮತ್ತೊಂದೆಡೆ ಕಾಂಗ್ರೆಸ್ ನಾಯಕ ಗೌರವ್ ಗೊಗೊಯ್ ಮಾತನಾಡಿ ಪ್ರಧಾನಿ ಮೋದಿ ಆರ್‌ಎಸ್‌ಎಸ್ ಮುಖ್ಯಸ್ಥರ ಮಾತನ್ನು ನಿರ್ಲಕ್ಷಿಸಿದರೂ ಅವರನ್ನು ಪ್ರಶ್ನಿಸಲು ಮತದಾರರು ಇಂಡಿಯಾ ಕೂಟದ ಸದಸ್ಯರನ್ನು ಆರಿಸಿರುವುದಾಗಿ ಎಚ್ಚರಿಕೆ ನೀಡಿದ್ದಾರೆ.