
ಬೆಂಗಳೂರು: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸುದ್ದಿಗಾರರೊಂದಿಗೆ ಮಾತನಾಡಿ 108 ಆರೋಗ್ಯ ಕವಚದ ಅಂಬುಲೆನ್ಸ್ ಚಾಲಕರಿಗೆ ಸರ್ಕಾರದ ಕಡೆಯಿಂದ ಯಾವುದೇ ವೇತನ ಬಾಕಿ ಉಳಿಸಿಕೊಂಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಅಂಬುಲೆನ್ಸ್ ಚಾಲಕರಿಗೆ ನ್ಯಾಯಯುತವಾಗಿ ಸಿಗಬೇಕಾದ ವೇತನವನ್ನ ಕಾಲ ಕಾಲಕ್ಕೆ ಸರಿಯಾಗಿ ಸಂಬಂಧಿಸಿದ ಏಜನ್ಸಿಯವರಿಗೆ ಸರ್ಕಾರ ನೀಡುತ್ತಾ ಬಂದಿದೆ. ಚಾಲಕರ ವೇತನ ಬಾಕಿ ಉಳಿಸಿಕೊಳ್ಳದಂತೆ ಇ.ಎಂ.ಆರ್ ಏಜನ್ಸಿಯವರಿಗೂ ಕಟ್ಟುನಿಟ್ಟಾಗಿ ಆದೇಶಿಸಲಾಗಿದೆ. ಆಗಸ್ಟ್, ಸೆಪ್ಟೆಂಬರ್ ತಿಂಗಳ ವೇತನವನ್ನ ಏಜನ್ಸಿಯವರು ಚಾಲಕರಿಗೆ ಪಾವತಿ ಮಾಡಿದ್ದಾರೆ. ಅಕ್ಟೋಬರ್ ತಿಂಗಳ ವೇತನ ಪಾವತಿ ಕೂಡ ಪ್ರಗತಿಯಲ್ಲಿದ್ದು, ಶೀಘ್ರದಲ್ಲಿ ಪಾವತಿಸುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.
ವಿಪಕ್ಷ ನಾಯಕರಾದ ಆರ್. ಅಶೋಕ್ ಅರೆಬರೆ ಮಾಹಿತಿ ಪಡೆದು ಅನಗತ್ಯ ಗೊಂದಲ ಸೃಷ್ಟಿಸುತ್ತಿದ್ದಾರೆ. ಒಬ್ಬ ವಿಪಕ್ಷ ನಾಯಕರಾಗಿ ವಾಸ್ತವಾಂಶಗಳನ್ನ ಅರಿತು ಮಾತನಾಡಬೇಕು. 108 ಸಮಸ್ಯೆ ಆರಂಭವಾಗಿದ್ದೇ ಬಿಜೆಪಿ ಸರ್ಕಾರದ ಅವಧಿಯಲ್ಲಿ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಏಜನ್ಸಿ ಹಾಗೂ ಚಾಲಕರ ನಡುವಿನ ಸಮಸ್ಯೆಯನ್ನು ಇಲಾಖೆ ಮಧ್ಯಸ್ಥಿಕೆ ವಹಿಸಿ ಸರಿಪಡಿಸುತ್ತಿದೆ.
ಪ್ರತಿಯೊಬ್ಬ ಅಂಬುಲೆನ್ಸ್ ಚಾಲಕರಿಗೆ 35 ಸಾವಿರಕ್ಕೂ ಹೆಚ್ವು ವೇತನ ದೊರೆಯುತ್ತಿದ್ದು ಇದರ ಮೇಲೂ ಮೂಲ ವೇತನದಲ್ಲಿ 45% ರಷ್ಟು ಹೆಚ್ಚಳ ಮಾಡುವ ಬಗ್ಗೆ ಸಿಬ್ಬಂದಿ ಬೇಡಿಕೆ ಇಟ್ಟಿದ್ದು, ನಿಯಮಬಾಹಿರವಾಗಿ ಈ ಕ್ರಮ ಕೈಗೊಳ್ಳಲು ಸದ್ಯದ ಪರಿಸ್ಥಿತಿಯಲ್ಲಿ ಸಾಧ್ಯವಿಲ್ಲ ಎಂದು ಹೇಳಿದರು.



















