
ಅಯೋಧ್ಯೆ: ಇತ್ತೀಚಿಗಷ್ಟೇ ಅಯೋಧ್ಯ ರಾಮಮಂದಿರದಲ್ಲಿ ಮಾಳಿಗೆ ಸೋರಿಕೆಯಾಗುತ್ತಿದೆ ಎಂಬ ಸುದ್ದಿ ಹರಿದಾಡಿದ್ದು ಈ ಕುರಿತು ಸ್ಪಷ್ಟನೆ ನೀಡಿದ ದೇಗುಲ ನಿರ್ಮಾಣ ಸಮಿತಿ ಅಧ್ಯಕ್ಷರಾದ ನೃಪೇಂದ್ರ ಮಿಶ್ರಾ ‘ವಿದ್ಯುತ್ ಪೈಪ್ ಹಾಕಿದ್ದ ಬಿರುಕಿನಿಂದ ನೀರು ಬಂದಿದೆ ಹೊರತು, ಮಾಳಿಗೆ ಸೋರಿಕೆಯಿಂದಲ್ಲ’ ಎಂದು ಮಾಹಿತಿ ನೀಡಿದ್ದಾರೆ.
‘ಪೂರ್ತಿ ವ್ಯವಸ್ಥೆಯನ್ನು ನಾನೇ ಖುದ್ದಾಗಿ ಪರಿಶೀಲನೆ ನಡೆಸಿದ್ದೇನೆ. ವಿದ್ಯುತ್ ಪೈಪ್ ಅಳವಡಿಸಲು ಹಾಕಿರುವ ಪೈಪ್‌ನಿಂದ ನೀರು ಬರುತ್ತಿದೆ, ಹೊರತು ಸೋರಿಕೆಯಿಂದಲ್ಲ. ಈಗ ಎರಡನೇ ಅಂತಸ್ತಿನ ಮಾಳಿಗೆ ಕಾಮಗಾರಿ ನಡೆಯುತ್ತಿದೆ. ಇದು ಪೂರ್ಣಗೊಂಡ ಬಳಿಕ ಎಲ್ಲವೂ ಸರಿಹೋಗುತ್ತದೆ’ ಎಂದರು.
ಇತ್ತೀಚಿಗೆ ದೇಗುಲದ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್, ‘ರಾಮ ಮಂದಿರದ ಗರ್ಭಗುಡಿಯಲ್ಲಿ ಅರ್ಚಕರು ಕುಳಿತುಕೊಳ್ಳುವ ಜಾಗದಲ್ಲೇ ನೀರು ಸೋರುತ್ತಿದೆ. ದೇಶದ ದೊಡ್ಡ ದೊಡ್ಡ ಎಂಜಿನಿಯರ್‌ಗಳು ಕಟ್ಟಿದ ಗುಡಿಯ ಸ್ಥಿತಿ ಹೀಗಿದೆ. ಅಯೋಧ್ಯೆಯಲ್ಲಿ ಭಾರೀ ಮಳೆಯಾಗುತ್ತಿರುವ ಬೆನ್ನಲ್ಲೇ ನೂತನವಾಗಿ ನಿರ್ಮಾಣಗೊಂಡಿರುವ ರಾಮಮಂದಿರದ ಗರ್ಭಗುಡಿಯಲ್ಲಿ ಛಾವಣಿಯಿಂದ ನೀರು ಸೋರಿಕೆಯಾಗುತ್ತಿದೆ. ಸೋರಿಕೆಯಾದ ನೀರು ಹೊರಹಾಕಲು ವ್ಯವಸ್ಥೆ ಕೂಡ ಇಲ್ಲ. ಹಾಗಾಗಿ ಭಕ್ತಾದಿಗಳು ಶ್ರೀರಾಮನಿಗೆ ಅಭಿಷೇಕ ಮಾಡುವುದನ್ನು ನಿಲ್ಲಿಸಿದ್ದಾರೆ ಎಂದು ಆರೋಪಿಸಿದ್ದರು.