
ಬೆಂಗಳೂರು: ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ಸುದ್ದಿಗಾರರೊಂದಿಗೆ ಮಾತನಾಡಿ ದರ್ಶನ್ ಮತ್ತು ಗ್ಯಾಂಗ್‌ನಿಂದಾದ ರೇಣುಕಾಸ್ವಾಮಿ ಕೊಲೆ ಕೃತ್ಯವನ್ನು ಖಂಡಿಸಿದ್ದಾರೆ.
ನಟರಾಗಿ ಜವಾಬ್ದಾರಿಯುತ ಸ್ಥಾನದಲ್ಲಿ ಸಮಾಜಕ್ಕೆ ಒಳ್ಳೆಯದನ್ನು ನೀಡಬೇಕು. ಅಭಿಮಾನಿಗಳನ್ನು ಬಳಸಿಕೊಂಡು ಕೊಲೆ ಮಾಡುವುದು ಎಷ್ಟು ಸರಿ? ಇಂತಹದ್ದನ್ನು ಸಮರ್ಥಿಸಿಕೊಂಡರೆ ಸಮಾಜಕ್ಕೆ ನಾವು ಕೊಡುವ ಸಂದೇಶ ಏನು? ಕಾನೂನಿಗಿಂತ ಯಾರೂ ದೊಡ್ಡವರಿಲ್ಲ. ಪೊಲೀಸರು ನಿಷ್ಪಕ್ಷಪಾತ ತನಿಖೆ ಮಾಡುತ್ತಾರೆ ಎಂದು ನಂಬಿದ್ದೇನೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಎಲ್ಲರಿಗೂ ಬ್ಲಾಕ್ ಮಾಡುವ ಆಯ್ಕೆ ಇದೆ. ಯಾರಾದರೂ ಟ್ರೋಲ್ ಮಾಡುತ್ತಿದ್ದರೆ ಮೊದಲು ಬ್ಲಾಕ್ ಮಾಡಿ. ನಾನು ಈ ಹಿಂದೆ ನನ್ನ ಟ್ರೋಲ್ ಮಾಡಿದ ಕೆಲವರ ವಿರುದ್ಧ ದೂರು ನೀಡಿದ್ದೆ. ಪೊಲೀಸರು ಕರೆದು ಎಚ್ಚರಿಕೆ ನೀಡಿದ ಬಳಿಕ ನಾನು ಕೇಸ್ ವಾಪಸ್ ಪಡೆದಿದ್ದೆ. ಈ ಹಿಂದೆ ಹಲವು ಪ್ರಕರಣಗಳಲ್ಲಿ ದರ್ಶನ್ ರಾಜಕೀಯ ಪ್ರಭಾವ ಬೀರಿರಬಹುದು. ಆದರೆ ಈ ಹಂತದಲ್ಲಿ ರಾಜಕೀಯ ಪ್ರಭಾವ ಬೀರಲು ಸಾಧ್ಯವಿಲ್ಲ. ಕಳೆದ ಚುನಾವಣೆಯಲ್ಲಿ ಕೆಲವು ಅಭ್ಯರ್ಥಿಗಳ ಪರ ಪ್ರಚಾರವೂ ಮಾಡಿದ್ದಾರೆ. ಹಾಗಂತ ಕಾನೂನಿಗಿಂತ ಯಾರು ದೊಡ್ಡವರಲ್ಲ. ಪೊಲೀಸ್ ಠಾಣೆಯ ಹೊರಗೆ ಕೆಲವು ಜನರು ಇದ್ದ ತಕ್ಷಣ ಪ್ರಭಾವ ಬೀರಲು ಸಾಧ್ಯವಿಲ್ಲ ಎಂದು ಹೇಳಿದರು.
ಫ್ಯಾನ್ ಕ್ಲಬ್‌ಗಳಿಂದ ಕಿಡ್ನಾಪ್ ಮಾಡಿಸುವುದು, ಹಲ್ಲೆ ಮಾಡುವುದು ನಿಜಕ್ಕೂ ಹಾಸ್ಯಸ್ಪದ. ಜನರು ಎಲ್ಲವನ್ನು ನೋಡುತ್ತಿದ್ದಾರೆ. ಯಾರೋ ಕೆಲವರು ಇದನ್ನು ಸಮರ್ಥಿಸಿಕೊಳ್ಳಬಹುದು. ಬಹುತೇಕ ಜನರು ಇದನ್ನು ಖಂಡಿಸಿದ್ದಾರೆ. ಚಿತ್ರರಂಗ ಇದನ್ನು ಖಂಡಿಸಬೇಕು ಎನ್ನುವ ಬಗ್ಗೆ ನಾನು ಮಾತನಾಡವುದಿಲ್ಲ. ದರ್ಶನ್ ಹಿನ್ನೆಲೆಯ ಮೇಲೆ ಅವರಿಗೆ ಅವರದೇ ಆದ ಯೋಚನಾ ಲಹರಿ ಇರುತ್ತದೆ. ಇಂತಹ ಬೆಳವಣಿಗೆಯನ್ನು ಖಂಡಿಸದಿದ್ದರೆ ನಾವು ಸಮಾಜಕ್ಕೆ ಏನು ಸಂದೇಶ ನೀಡುತ್ತಿದ್ದೇವೆ ಎಂದು ಪ್ರಶ್ನೆ ಮಾಡಿದ್ದಾರೆ