
ಬೆಂಗಳೂರು: ಅಪ್ರಾಪ್ತ ವಯಸ್ಕರ ಮದ್ಯಪಾನ ಹಾಗೂ ಮಾದಕ ದ್ರವ್ಯ ಬಳಕೆಯನ್ನು ತಡೆಯಲು ಬೆಂಗಳೂರಿನ ಪಬ್, ಬಾರ್, ಕ್ಲಬ್, ಬ್ರೂವರಿ, ಲಾಂಜ್ ಮತ್ತು ಮದ್ಯ ಪೂರೈಸುವ ಎಲ್ಲಾ ಸಂಸ್ಥೆಗಳ ವಿರುದ್ಧ ಕಟ್ಟುನಿಟ್ಟಿನ ನಿಗಾ ವಹಿಸುವಂತೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ನಗರದ ವಿದ್ಯಾರ್ಥಿಗಳ ನಡುವೆ ನಡೆದ ಅಧ್ಯಯನದಲ್ಲಿ ಪ್ರತಿ ಮೂವರಲ್ಲಿ ಒಬ್ಬ ಹದಿಹರೆಯದವರು ಮದ್ಯ ಅಥವಾ ತಂಬಾಕು ಬಳಕೆಯಿಂದ ಆರೋಗ್ಯ ಅಪಾಯ ಎದುರಿಸುತ್ತಿರುವುದು ಬೆಳಕಿಗೆ ಬಂದ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಮದ್ಯ ಮಾರಾಟ ಮಾಡುವ ಸಂಸ್ಥೆಗಳು ಪ್ರವೇಶದ ವೇಳೆ ಹಾಗೂ ಮದ್ಯ ಪೂರೈಸುವ ಮೊದಲು ಕಡ್ಡಾಯವಾಗಿ ಗ್ರಾಹಕರ ವಯಸ್ಸು ಪರಿಶೀಲಿಸಬೇಕು. ಗುರುತಿನ ಚೀಟಿ ಇಲ್ಲದವರಿಗೆ ಪ್ರವೇಶ ನೀಡಬಾರದು ಎಂದು ಆದೇಶಿಸಲಾಗಿದೆ.
ಅಪ್ರಾಪ್ತರಿಗೆ ಮದ್ಯ ಪೂರೈಸುವ ಅಥವಾ ಮದ್ಯಪಾನಕ್ಕೆ ಅವಕಾಶ ನೀಡುವ ಸಂಸ್ಥೆಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು. ನಿಯಮ ಉಲ್ಲಂಘನೆಗೆ ಮಾಲೀಕರು, ವ್ಯವಸ್ಥಾಪಕರು ಹಾಗೂ ಪರವಾನಗಿದಾರರನ್ನು ನೇರ ಹೊಣೆಗಾರರನ್ನಾಗಿ ಮಾಡಲಾಗುತ್ತದೆ.
ಪ್ರವೇಶ ದ್ವಾರಗಳ ಸಿಸಿಟಿವಿ ಕ್ಯಾಮೆರಾಗಳು ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಬೇಕು ಹಾಗೂ ದೃಶ್ಯಾವಳಿಗಳನ್ನು ನಿಗದಿತ ಅವಧಿಯವರೆಗೆ ಸಂರಕ್ಷಿಸಬೇಕು. ಯುವ ಪೀಳಿಗೆಯನ್ನು ವ್ಯಸನಗಳಿಂದ ರಕ್ಷಿಸಲು ಪೊಲೀಸರು, ಶಿಕ್ಷಣ ಸಂಸ್ಥೆಗಳು, ಪೋಷಕರು ಹಾಗೂ ನಾಗರಿಕ ಸಂಘಟನೆಗಳ ಸಹಕಾರದೊಂದಿಗೆ ಕಾರ್ಯಾಚರಣೆ ನಡೆಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.































































































































