
ಬೆಂಗಳೂರು: ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಬಡವರು, ಮಧ್ಯಮ ವರ್ಗದವರು ಜೀವನ ನಡೆಸುವುದೇ ಕಷ್ಟವಾಗಿದ್ದು ಇದೀಗ ಈರುಳ್ಳಿ ಬೆಲೆಯಲ್ಲಿ ಮತ್ತೆ ಏರಿಕೆಯಾಗಿದೆ. ಸದ್ಯ ಕರ್ನಾಟಕದ ಹಲವೆಡೆ ಅಧಿಕ ಮಳೆಯಿಂದಾಗಿ ಬೆಳೆ ನೀರುಪಾಲಗುತ್ತಿದ್ದರೆ, ಮತ್ತೊಂದೆಡೆ ಈರುಳ್ಳಿ ಮಳೆಯಿಂದಾಗಿ ಇಟ್ಟಲ್ಲೇ ಕೊಳೆತು ಹೋಗುತ್ತಿರುವುದರಿಂದ 50 ರೂ. ಇದ್ದ ಈರುಳ್ಳಿಯ ಬೆಲೆ ಇದೀಗ 60 ರಿಂದ 70 ರೂ ಆಗಿದೆ.
ರಾಜ್ಯದಲ್ಲಿ ಹೆಚ್ಚು ಮಳೆಯಾಗುತ್ತಿರುವ ಪರಿಣಾಮ ಈರುಳ್ಳಿಯ ಉತ್ಪಾದನೆಯಲ್ಲಿ ಭಾರಿ ಕುಸಿತವಾಗಿದ್ದು ಹೀಗಾಗಿ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಪೂರೈಕೆಯಾಗುತ್ತಿಲ್ಲ.
ಈ ಹಿಂದೆ ಉತ್ತರ ಕರ್ನಾಟಕ ಭಾಗದಿಂದ ಈರುಳ್ಳಿ ರಾಜ್ಯಕ್ಕೆ ಪೂರೈಕೆಯಾಗುತ್ತಿತ್ತು. ಆದರೆ, ಈಗ ಉತ್ತರ ಕರ್ನಾಟಕದಲ್ಲಿ ಹೆಚ್ಚು ಮಳೆಯಾಗುತ್ತಿದ್ದು, ಮಳೆಗೆ ಈರುಳ್ಳಿ ಕೊಳೆತು ಹೋಗುತ್ತಿದೆ. ಸದ್ಯ ರಾಜ್ಯಕ್ಕೆ ಪುಣೆ, ಮಹಾರಾಷ್ಟ್ರದಿಂದ ಈರುಳ್ಳಿ ತರುಹಿಸಿಕೊಳ್ಳಲಾಗುತ್ತಿದೆ.













