
ಮಂಗಳೂರು: ಇಂಟರ್ನ್ಯಾಷನಲ್ ಏಜೆನ್ಸಿ ಫಾರ್ ರಿಸರ್ಚ್ ಆನ್ ಕ್ಯಾನ್ಸರ್ (ಐಎಆರ್ಸಿ) ಮಾಹಿತಿ ಆಧಾರಿತ ವಿಶ್ವ ಅರೋಗ್ಯ ಸಂಸ್ಥೆಯು ಅಡಿಕೆ ಕ್ಯಾನ್ಸರ್ ಕಾರಕ ಎಂದು ವರದಿ ಬಿಡುಗಡೆ ಮಾಡಿದ್ದು ಇದು ಮುಖ್ಯವಾಗಿ ಕರ್ನಾಟಕ ಕರಾವಳಿ ಹಾಗೂ ಮಲೆನಾಡು ಭಾಗದ ಅಡಿಕೆ ಬೆಳೆಗಾರರನ್ನು ಕಂಗೆಡಿಸಿತ್ತು. ಆದರೆ, ಇದೀಗ ನಿಟ್ಟೆ ವಿವಿಯ ವಿಜ್ಞಾನಿ ಪ್ರ. ಇಡ್ಯಾ ಕರುಣಾಸಾಗರ್ ಮತ್ತವರ ತಂಡ ಮಹತ್ವದ ಸಂಶೋಧನೆ ನಡೆಸಿದ್ದು, ಅಡಿಕೆ ಕ್ಯಾನ್ಸರ್ ಕಾರಕವಲ್ಲ. ಬದಲಿಗೆ ಕ್ಯಾನ್ಸರ್ ಪ್ರತಿಬಂಧಕ ಅಂಶ ಅಡಿಕೆಯಲ್ಲಿದೆ ಎಂದು ವರದಿ ಮಾಡಿ ಅಡಿಕೆ ಬೆಳೆಗಾರರಿಗೆ ಸಂತಸ ನೀಡಿದೆ.
ನಿಟ್ಟೆ ವಿವಿಯ ವಿಜ್ಞಾನಿಗಳ ತಂಡವು ಅಡಿಕೆ ರಸ ಕ್ಯಾನ್ಸರ್ ಕಣಗಳ ಬೆಳವಣಿಗೆಯನ್ನು ಪ್ರತಿಬಂಧಿಸುತ್ತದೆ ಎಂಬುದನ್ನು ಪತ್ತೆ ಮಾಡಿದ್ದು ಅಡಿಕೆಯ ಬಳಕೆಯಿಂದ ಆರೋಗ್ಯಕ್ಕೆ ಯಾವುದೇ ಹಾನಿಯಿಲ್ಲ ಎಂದು ತಿಳಿಸಿದೆ.
ಈ ಕುರಿತು ಮಾತನಾಡಿರುವ ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಐಸಿಎಎಆರ್ ವರದಿ ಸತ್ಯಕ್ಕೆ ದೂರವಾದ ವಿಚಾರ. ಹೀಗಾಗಿ ಈ ಬಗ್ಗೆ ಅಡಿಕೆ ಬೆಳೆಗಾರರಿಗೆ ಆತಂಕ ಬೇಡ. ನಾವು ನಿಟ್ಟೆ ವಿವಿ ಜೊತೆ ನಡೆಸಿದ ಸಂಶೋಧನೆಯಲ್ಲಿ ಅಡಿಕೆ ಕ್ಯಾನ್ಸರ್ ಕಾರಕವಲ್ಲ ಎಂಬ ವರದಿ ಬಂದಿದೆ ಎಂದು ಹೇಳಿದ್ದಾರೆ.