ಶಾಲಾ ಸಂಸತ್ತು ಉದ್ಘಾಟನೆ ಹಾಗೂ ಪ್ರಮಾಣವಚನ ಸ್ವೀಕಾರ ಸಮಾರಂಭ

ಅಜೆಕಾರು ಜ್ಞಾನಸುಧಾ ಆಂಗ್ಲ ಮಾಧ್ಯಮ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜು, ಪದ್ಮನಗರದಲ್ಲಿ ಜುಲೈ 27ರಂದು ಪ್ರೌಢಶಾಲಾ ವಿಭಾಗದ ಶಾಲಾ ಸಂಸತ್ತು ಉದ್ಘಾಟನಾ ಸಮಾರಂಭ ಹಾಗೂ ಪೋಷಕರ ಸಭೆ ಯಶಸ್ವಿಯಾಗಿ ನಡೆಯಿತು.
ಕಾರ್ಯಕ್ರಮವು ವಿದ್ಯಾರ್ಥಿಗಳಿಂದ ನಡೆದ ಭಕ್ತಿಭಾವಪೂರ್ಣ ಪ್ರಾರ್ಥನಾ ನೃತ್ಯದೊಂದಿಗೆ ಶುಭಾರಂಭಗೊಂಡಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ರಾಷ್ಟ್ರೀಯ ಮಹಿಳಾ ಆಯೋಗದ ಮಾಜಿ ಸದಸ್ಯೆ ಶ್ರೀಮತಿ ಶಾಮಲಾ ಎಸ್. ಕುಂದರ್ ಅವರು ನೂತನವಾಗಿ ಆಯ್ಕೆಯಾದ ವಿದ್ಯಾರ್ಥಿ ನಾಯಕರಿಗೆ ಶುಭ ಹಾರೈಸಿದರು. “ಜೀವನದಲ್ಲಿ ಎಂದಿಗೂ ಅಹಂಕಾರ ಪಡಬಾರದು. ಎಷ್ಟೇ ಉನ್ನತ ಸ್ಥಾನಕ್ಕೆ ಏರಿದರೂ ಸರಳತೆ, ಪ್ರಾಮಾಣಿಕತೆ ಹಾಗೂ ಸೇವಾ ಮನೋಭಾವವನ್ನು ಅಳವಡಿಸಿಕೊಳ್ಳಬೇಕು” ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಅಲ್ಲದೆ, ಪ್ರತಿಯೊಬ್ಬ ವಿದ್ಯಾರ್ಥಿಯೂ ಉನ್ನತ ಕನಸುಗಳನ್ನು ಕಂಡು ಅವುಗಳನ್ನು ನನಸಾಗಿಸಲು ದೃಢ ಸಂಕಲ್ಪದಿಂದ ಶ್ರಮಿಸಬೇಕು ಎಂದು ಪ್ರೇರಣಾದಾಯಕ ಸಂದೇಶ ನೀಡಿದರು.
ಶಾಲೆಯ ಪ್ರಾಂಶುಪಾಲರಾದ ಸಂತೋಷ್ ಅವರು ನೂತನ ವಿದ್ಯಾರ್ಥಿ ಸಂಸತ್ ಸದಸ್ಯರಿಗೆ ಪ್ರಮಾಣವಚನ ಬೋಧಿಸಿ, ಶಾಲೆಯ ಶಿಸ್ತು, ಗೌರವ ಹಾಗೂ ವಿದ್ಯಾರ್ಥಿಗಳ ಹಿತಕ್ಕಾಗಿ ನಿಷ್ಠೆಯಿಂದ ಕಾರ್ಯನಿರ್ವಹಿಸುವಂತೆ ಕರೆ ನೀಡಿದರು.
ಜ್ಞಾನಸುಧ ಶಿಕ್ಷಣ ಸಂಸ್ಥೆಗಳ ಎ.ಪಿ.ಆರ್.ಒ. ರಾಮಚಂದ್ರ ನೆಲ್ಲಿಕಾರ್ ಅವರು ಮಾತನಾಡಿ, 2026–27ನೇ ಸಾಲಿನ ಅಜೆಕಾರು ಜ್ಞಾನಸುಧಾದ ವಿದ್ಯಾರ್ಥಿ ಸಂಸತ್ತು ಮಾದರಿ ಸಂಸತ್ತಾಗಿ ಬೆಳೆಯಲಿ ಎಂದು ಹಾರೈಸಿದರು. ಪ್ರತಿಯೊಬ್ಬ ವಿದ್ಯಾರ್ಥಿಯೂ ನಾಯಕತ್ವದ ಗುಣಗಳನ್ನು ಬೆಳೆಸಿಕೊಂಡು ಸಾಧನೆಯ ಹಾದಿಯಲ್ಲಿ ಮುನ್ನಡೆಯುತ್ತಾ ದೇಶದ ಉತ್ತಮ ನಾಗರಿಕರಾಗಬೇಕೆಂದು ಶುಭ ಹಾರೈಸಿದರು.
ಉಪಪ್ರಾಂಶುಪಾಲರಾದ ಶ್ರೀಮತಿ ಆರತಿ ಅವರು ವಿದ್ಯಾರ್ಥಿಗಳಿಗೆ ಜವಾಬ್ದಾರಿಯುತ ನಾಯಕತ್ವ, ಶಿಸ್ತು ಹಾಗೂ ಸೇವಾ ಮನೋಭಾವದ ಕುರಿತು ಅಮೂಲ್ಯ ಸಲಹೆಗಳನ್ನು ನೀಡಿದರು.
ಕಾರ್ಯಕ್ರಮದಲ್ಲಿ ಕುಮಾರಿ ಕೀರ್ತನಾ ಸ್ವಾಗತಿಸಿದರು. ಶಿಕ್ಷಕಿ ಆಶಾ ಜ್ಯೋತಿ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ವಿದ್ಯಾರ್ಥಿನಿ ಅದಿತಿ ಶೆಟ್ಟಿ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು. ವಿದ್ಯಾರ್ಥಿ ಲಿಸ್ಟನ್ ಮಿನೇಜಸ್ ವಂದನಾರ್ಪಣೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಶಿಕ್ಷಕರು, ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದು, ನೂತನ ವಿದ್ಯಾರ್ಥಿ ಸಂಸತ್ ಸದಸ್ಯರಿಗೆ ಶುಭ ಹಾರೈಸಿದರು.






























































































































