
ಬೆಂಗಳೂರು : ಹೊಸ ವರ್ಷಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿದ್ದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೊಸ ವರ್ಷಾಚರಣೆ ವೇಳೆಯಲ್ಲಿ ಮದ್ಯ ಸೇವಿಸುವವರನ್ನು ಪೊಲೀಸ್ ವಾಹನದಲ್ಲಿ ಅವರ ಮನೆಗೆ ತಲುಪಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದ್ದು ಇದಕ್ಕೆ ಭಾರಿ ಆಕ್ಷೇಪ ವ್ಯಕ್ತವಾಗಿದೆ.
ಗೃಹ ಸಚಿವರು, ಹೊಸ ವರ್ಷಾಚರಣೆಯ ಹಿನ್ನೆಲೆಯಲ್ಲಿ ಕೈಗೊಂಡಿರುವ ಭದ್ರತೆಯ ಕುರಿತು ಭಾನುವಾರ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ಕೆಲವು ಕಡೆ ಟ್ಯಾಕ್ಸಿಗಳು ಸಿಗುವುದಿಲ್ಲ. ಅಂತವರು ಸುರಕ್ಷಿತವಾಗಿ ಮನೆಗಳಿಗೆ ಹೋಗಲು 8 ಕಡೆ ಸಾರಿಗೆ ವ್ಯವಸ್ಥೆ ಮಾಡಲಾಗಿದೆ. ಅತಿಯಾಗಿ ಮದ್ಯ ಸೇವಿಸಿರುವವರನ್ನು ಮನೆಗೆ ತಲುಪಿಸಲು ಖಾಸಗಿ ವಾಹನದ ವ್ಯವಸ್ಥೆ ಮಾಡಲಾಗಿದೆ. ಜತೆಗೆ ಅವರನ್ನು ಪೊಲೀಸ್ ವಾಹನದಲ್ಲಿಯೇ ಅವರನ್ನು ಮನೆಗೆ ಕರೆದೊಯ್ದು ಬಿಡಲಾಗುವುದು ಎಂದು ಹೇಳಿದ್ದರು.
ಈ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಬಾರಿ ವೈರಲ್ ಆಗಿದ್ದು, ಗೃಹ ಸಚಿವರ ಹೇಳಿಕೆಗೆ ನೆಟ್ಟಿಗರು ಆಕ್ಷೇಪಿಸಿದ್ದಾರೆ.





