
ಹೆಬ್ರಿ :ಸನಾತನ ಧರ್ಮದ ಸಂಸ್ಕೃತಿಯನ್ನು ಪಾಲಿಸುವ ನಮ್ಮ ನಾಡಿನಲ್ಲಿ ಗೋವುಗಳಿಗೆ ಪರಮ ಪವಿತ್ರ ಸ್ಥಾನವಿದೆ. ಗೋವುಗಳನ್ನು ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯ. ಗೋಮಯದಲ್ಲಿ ಮಹಾಲಕ್ಷ್ಮಿಯ ಸನ್ನಿಧಾನ ಇದೆ. ಗೋಮಯವನ್ನು ಸಾರಿಸಿ ಆ ನೆಲದಲ್ಲಿ ನೈವೇದ್ಯವನ್ನು ಇಟ್ಟು ದೇವರಿಗೆ ಸಮರ್ಪಿಸಿದರೆ ದೇವರು ಸಂತುಷ್ಟಗೊಳ್ಳುತ್ತಾನೆ. ಗೋವುಗಳ ಪಾಲನೆಗೆ ಬೇಕಾದ ಎಲ್ಲ ವ್ಯವಸ್ಥೆಗಳು ಗಿಲ್ಲಾಳಿ ಗೋಶಾಲೆಯಲ್ಲಿ ನಡೆಯುತ್ತಿದೆ. ಗೋಭಕ್ತರ ನೆರವಿನಿಂದ ಗೋವುಗಳಿಗೆ ಬೇಕಾದ ಹಸಿ ಹುಲ್ಲು, ಒಣಹುಲ್ಲು ಎಲ್ಲೆಡೆಯಿಂದ ಹರಿದು ಬರಲಿ. ಗೋವುಗಳ ಸೇವೆ ಮಾಡುವ ಭಾಗ್ಯ ಎಲ್ಲರಿಗೂ ಒದಗಿ ಬರಲಿ ಎಂದು ಸುಬ್ರಮಣ್ಯ ಮಠಾಧೀಶ ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀ ಪಾದರು ಹೇಳಿದರು.
ಅವರು ಹೆಬ್ರಿ ಗಿಲ್ಲಾಳಿ ಶ್ರೀ ವಿಶ್ವೇಶಕೃಷ್ಣ ಗೋಶಾಲೆಯಲ್ಲಿ ನಿರ್ಮಾಣಗೊಂಡ ಒಣಹುಲ್ಲು ದಾಸ್ತಾನು ಕಟ್ಟಡವನ್ನು ಗೋಪಾಲಕೃಷ್ಣ ದೇವರ ಪೂಜೆಯನ್ನು ನೆರವೇರಿಸುವುದರ ಮೂಲಕ ಉದ್ಘಾಟಿಸಿ ಆಶೀರ್ವಚನ ಮಾಡಿದರು. ಈ ಸಂದರ್ಭದಲ್ಲಿ ಕಾರ್ಕಳ ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ನ ಡಾ. ಗುರುಚರಣ್, ಗೋಶಾಲೆಯ ಟ್ರಸ್ಟಿಗಳಾದ ಎಂ. ರವಿ ರಾವ್, ಡಾ. ಭಾರ್ಗವಿ ಆರ್. ಐತಾಳ್, ಶ್ರೀಕಾಂತ್ ಭಟ್ ಅಜೆಕಾರು, ವಿಷ್ಣುಮೂರ್ತಿ ಆಚಾರ್ಯ ಗಿಲ್ಲಾಳಿ, ಐತು ಕುಲಾಲ್ ಕನ್ಯಾನ, ಲಕ್ಷ್ಮಣ ಭಟ್ ಹೆಬ್ರಿ ಹಾಗೂ ವಿದ್ವಾನ್ ಶ್ರೀರಮಣ ಕಲ್ಕೂರ್ ಉಪ್ಪಳ,ವೇದವ್ಯಾಸ ತಂತ್ರಿ ಮಡಾಮಕ್ಕಿ, ಸುದರ್ಶನ್ ಕಲ್ಕೂರ್ ಉಪ್ಪಳ, ಗೋಶಾಲೆಯ ಉಸ್ತುವಾರಿ ಸುಬ್ರಮಣ್ಯ ನಾಯಕ್ ಉಪಸ್ಥಿತರಿದ್ದರು. ಗೋಶಾಲೆಯ ಟ್ರಸ್ಟಿಗಳಾದ ಪದ್ಮನಾಭ ಆಚಾರ್ಯ ಸ್ವಾಗತಿಸಿ, ಬಲ್ಲಾಡಿ ಚಂದ್ರಶೇಖರ ಭಟ್ ವಂದಿಸಿದರು.







