
ಬೆಂಗಳೂರು: ರಾಜ್ಯ ಸರ್ಕಾರವು ಹುಬ್ಬಳ್ಳಿ ಗಲಭೆ ಪ್ರಕರಣವನ್ನು ವಾಪಸ್ ಪಡೆಯಲು ನಿರ್ಧಾರಿಸಿದ್ದು ಇದನ್ನು ಖಂಡಿಸಿ ಬಿಜೆಪಿ ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಂಡಿದೆ.
ರಾಜ್ಯಬಿಜೆಪಿ ಘಟಕವು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲೂ ಪ್ರತಿಭಟನೆ ನಡೆಸಿದ್ದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಿಪಕ್ಷ ನಾಯಕ ಆರ್.ಅಶೋಕ್, ಅಶ್ವಥ್ ನಾರಾಯಣ, ಶಾಸಕರಾದ ಎಸ್.ಆರ್ ವಿಶ್ವನಾಥ್, ಸಿ.ಕೆ ರಾಮಮೂರ್ತಿ, ರವಿ ಸುಬ್ರಹ್ಮಣ್ಯ, ಸಂಸದ ಕಾರಜೋಳ, ಎಮ್ಎಲ್ಸಿ ರವಿಕುಮಾರ್ ಮೊದಲಾದ ನಾಯಕರು ಪಾಲ್ಗೊಂಡು ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ, ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಪ್ರತಿಭಟನೆ ವೇಳೆ ಮಾತನಾಡಿ, ಆವತ್ತು ಹುಬ್ಬಳ್ಳಿ ಪೊಲೀಸ್ ಠಾಣೆ ಮುಂದೆ ಅಲ್ಪಸಂಖ್ಯಾತರು ಪ್ರತಿಭಟನೆ ನಡೆಸಿದ್ದು, ಕಲ್ಲೆಸೆದಿದ್ದರು, ಪೊಲೀಸರ ಕಾಲರ್ ಹಿಡಿದು, ಹಲ್ಲೆ ಮಾಡಿದರು. ಇದೆಲ್ಲ ಕ್ರಿಮಿನಲ್ ಕೇಸ್ಗಳು, ಇದನ್ನೆಲ್ಲ ಸರ್ಕಾರ ವಾಪಸ್ ಪಡೆದಿದೆ. ಈ ಸರ್ಕಾರಕ್ಕೆ ಅಲ್ಪಸಂಖ್ಯಾತರ ಮೇಲೆ ವಿಪರೀತ ಪ್ರೀತಿ, ಇದೇ ತುಷ್ಟೀಕರಣ ನೀತಿ. ಈ ಗಲಭೆಕೋರ ಗುಂಪಿನಲ್ಲಿ ಪಿಎಫ್ಐ ಸದಸ್ಯರು ಇದ್ದರು ಎನ್ನಲಾಗಿದೆ, ಎನ್ಐಎಗೆ ಈ ಗುಂಪಿನ ಮೇಲೆ ಅನುಮಾನ ಇದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿಗಳು ಸಿ.ಟಿ ರವಿ, ಪ್ರಹ್ಲಾದ್ ಜೋಶಿ ಮೇಲಿನ ಕೇಸ್ ವಾಪಸ್ ಪಡೀಲಿಲ್ವಾ ಅಂತಾರೆ, ಸಿಟಿ ರವಿ, ಜೋಶಿ ಭಯೋತ್ಪಾದಕರಾ? ಪ್ರಹ್ಲಾದ್ ಜೋಶಿ, ಭಯೋತ್ಪಾದಕ ಅಂತ ಸಿದ್ದರಾಮಯ್ಯ ಹೇಳಿದ್ದಾರೆ. ಸಿದ್ದರಾಮಯ್ಯ ಕೂಡಲೇ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದ್ದಾರೆ.













