
ಮೈಸೂರು: ಹಿರಿಯ ಗಾಯಕಿ ಎಸ್. ಜಾನಕಿ ಅವರು ಇಂದು (ಜುಲೈ 11) ಹೃದಯಾಘಾತದಿಂದ ನಿಧನರಾಗಿದ್ದಾರೆ. 88 ವರ್ಷದ ಜಾನಕಿ ಅವರು ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದು, ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. 20ಕ್ಕೂ ಹೆಚ್ಚು ಭಾಷೆಗಳಲ್ಲಿ 48 ಸಾವಿರಕ್ಕೂ ಅಧಿಕ ಹಾಡುಗಳನ್ನು ಹಾಡಿರುವ ಅವರು ಸಂಗೀತ ಲೋಕದಲ್ಲಿ ಅಳಿಸಲಾಗದ ಗುರುತು ಮೂಡಿಸಿದ್ದಾರೆ. ಅವರ ನಿಧನಕ್ಕೆ ವಿವಿಧ ಕ್ಷೇತ್ರಗಳ ಗಣ್ಯರು ಸಂತಾಪ ಸೂಚಿಸಿದ್ದಾರೆ.
ಈ ವರ್ಷದ ಜನವರಿಯಲ್ಲಿ ಪುತ್ರ ಮುರಳಿ ಕೃಷ್ಣ ಅವರ ನಿಧನದಿಂದ ಜಾನಕಿ ಅವರು ತೀವ್ರ ದುಃಖಕ್ಕೊಳಗಾಗಿದ್ದ ಅವರು ಪುತ್ರನ ಅಗಲಿಕೆಯ ಬಳಿಕ ಆರೋಗ್ಯ ಮತ್ತಷ್ಟು ಹದಗೆಟ್ಟಿದ್ದು, ಚಿಕಿತ್ಸೆ ಫಲಕಾರಿಯಾಗದೆ ಇಂದು ವಿಧಿವಶರಾದರು.
ತೆಲುಗು ಮೂಲದವರಾದರೂ ಕನ್ನಡ ಚಿತ್ರರಂಗದಲ್ಲಿ ತಮ್ಮ ಸ್ಪಷ್ಟ ಉಚ್ಚಾರಣೆ ಮತ್ತು ಮಧುರ ಕಂಠದ ಮೂಲಕ ಅಪಾರ ಜನಪ್ರಿಯತೆ ಗಳಿಸಿ ಸಾವಿರಾರು ಸೂಪರ್ ಹಿಟ್ ಹಾಡುಗಳನ್ನು ಕನ್ನಡಕ್ಕೆ ನೀಡಿದ್ದಾರೆ. 1970 ಮತ್ತು 80ರ ದಶಕದಲ್ಲಿ ಜಾನಕಿ ಅವರು ಕನ್ನಡ ಚಿತ್ರರಂಗದ ಅಗ್ರ ಹಿನ್ನೆಲೆ ಗಾಯಕಿಯಾಗಿ ಮೆರೆದರು. ಡಾ. ರಾಜ್‌ಕುಮಾರ್ ಅವರೊಂದಿಗೆ ಅವರು ಹಾಡಿದ ‘ಎಲ್ಲೆಲ್ಲಿ ನೋಡಲಿ ನಿನ್ನನ್ನೇ ಕಾಣುವೆ’ ಸೇರಿದಂತೆ ಅನೇಕ ಯುಗಳ ಗೀತೆಗಳು ಇಂದಿಗೂ ಜನಮನದಲ್ಲಿ ಉಳಿದಿವೆ. ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರೊಂದಿಗೆ ಹಾಡಿದ ರೊಮ್ಯಾಂಟಿಕ್ ಗೀತೆಗಳೂ ಸಂಗೀತ ಪ್ರಿಯರ ಮೆಚ್ಚಿನ ಪಟ್ಟಿಯಲ್ಲಿವೆ. ನಾಲ್ಕು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು, 33 ರಾಜ್ಯ ಚಲನಚಿತ್ರ ಪ್ರಶಸ್ತಿಗಳು, ರಾಜ್ಯೋತ್ಸವ ಪ್ರಶಸ್ತಿ, ಕಲೈಮಾಮಣಿ, ಗೌರವ ಡಾಕ್ಟರೇಟ್ ಹಾಗೂ 2013ರ ಪದ್ಮಭೂಷಣ ಸೇರಿದಂತೆ ಹಲವು ಪ್ರತಿಷ್ಠಿತ ಗೌರವಗಳು ಅವರಿಗೆ ಲಭಿಸಿವೆ.











































