
ಬೆಂಗಳೂರು: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಲಾಲ್ ಪ್ರಮಾಣ ಪತ್ರ ಹೊಂದಿರುವ ಸಂಸ್ಥೆಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಗೊಳಿಸಬೇಕು ಎಂದು ಆಗ್ರಹಿಸಿ ಕೇಂದ್ರ ಸಚಿವ ಅಮಿತ್ ಶಾ ಅವರಿಗೆ ಪತ್ರದ ಮೂಲಕ ಮನವಿ ಮಾಡಿದ್ದಾರೆ.
ಈ ರೀತಿಯ ಪ್ರಮಾಣ ಪತ್ರ ನೀಡುವಿಕೆ ಭಾರತದ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದ್ದು ಈ ಮೂಲಕ ಸಂಗ್ರಹವಾದ ಹಣ ರಾಷ್ಟ್ರ ವಿರೋಧಿ ಚಟುವಟಿಕೆಗೆ ಬಳಕೆಯಾಗುತ್ತಿರುವ ಬಗ್ಗೆ ಸಾಕಷ್ಟು ದಾಖಲೆಗಳಿವೆ. ಭಯೋತ್ಪಾದನೆ ಹಾಗೂ ಜಿಹಾದಿ ಚಟುವಟಿಕೆಯಲ್ಲಿ ಭಾಗಿಯಾದವರಿಗೆ ಕಾನೂನು ಸೌಲಭ್ಯ ಒದಗಿಸುವುದಕ್ಕೂ ಈ ಮಾರ್ಗದ ಮೂಲಕ ಸಂಗ್ರಹವಾದ ಹಣ ಬಳಕೆಯಾಗುತ್ತಿದೆ. ಉತ್ತರ ಪ್ರದೇಶದಲ್ಲಿ ಈಗಾಗಲೇ ಹಲಾಲ್ ಉತ್ಪನ್ನಗಳನ್ನು ನಿಷೇಧಿಸಲಾಗಿದ್ದು ಇದೇ ರೀತಿ ದೇಶಾದ್ಯಂತ ಹಲಾಲ್ ಉತ್ಪನ್ನಗಳು ಹಾಗೂ ಅದನ್ನು ಪ್ರಮಾಣಿಕರಿಸುವ ಸಂಸ್ಥೆಗಳು ನಿಷೇಧವಾಗಬೇಕು.
ಕೇಂದ್ರ ಸರ್ಕಾರದ ಅಡಿಯಲ್ಲಿ ಬರುವ ಆಹಾರ ಸುರಕ್ಷತಾ ಕಾಯ್ದೆ ಪ್ರಕಾರವೇ ಆಹಾರಗಳಿಗೆ ಪ್ರಮಾಣ ಪತ್ರ ನೀಡಲಾಗುತ್ತದೆ. ಇದು ರಾಷ್ಟ್ರದ ಅಧಿಕೃತ ನಿಯಮ. ಹೀಗಿರುವಾಗ ಹಲಾಲ್ ಪ್ರಮಾಣ ಪತ್ರದ ಅಗತ್ಯವೇನಿದೆ? ಹಲಾಲ್ ಶರಿಯಾ ಕಾಯ್ದೆ ವ್ಯಾಪ್ತಿಯಲ್ಲಿ ಬರುತ್ತದೆ. ಈ ಕಾಯ್ದೆಗೆ ಭಾರತದಲ್ಲಿ ಯಾವುದೇ ಬೆಲೆ ಇಲ್ಲ. ಹೀಗಾಗಿ ಹಲಾಲ್ ಪ್ರಮಾಣ ಪತ್ರ ವ್ಯವಸ್ಥೆಯನ್ನು ತಕ್ಷಣ ರದ್ದುಗೊಳಿಸಬೇಕೆಂದು ಪತ್ರದ ಮೂಲಕ ಆಗ್ರಹಿಸಿದ್ದಾರೆ.








