
ಹೊಸಪೇಟೆ: ವಿಶ್ವಪ್ರಸಿದ್ಧ ಹಂಪಿ ಉತ್ಸವದ ಉದ್ಘಾಟನಾ ಕಾರ್ಯಕ್ರಮದ ವೇಳೆ ಅಲ್ಪ ಸಮಯದ ಆತಂಕದ ಪರಿಸ್ಥಿತಿ ಉಂಟಾಗಿತ್ತು. ಅದೇನೆಂದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ವೇದಿಕೆಯಲ್ಲಿ ಪೂಜೆ ಸಲ್ಲಿಸುತ್ತಿದ್ದಾಗ ಪಟಾಕಿಯಿಂದ ಹೊರಬಂದ ಕಿಡಿ ವೇದಿಕೆಯ ಬದಿಗೆ ಬಿದ್ದು ಬೆಂಕಿ ಕಾಣಿಸಿಕೊಂಡಿತು.
ವಿಜಯನಗರ ಜಿಲ್ಲೆಯ ಹಂಪಿಯಲ್ಲಿ ನಡೆಯುತ್ತಿದ್ದ ಅದ್ಧೂರಿ ಉತ್ಸವಕ್ಕೆ ಚಾಲನೆ ನೀಡುವ ಕ್ಷಣದಲ್ಲಿ ಈ ಘಟನೆ ಸಂಭವಿಸಿದ್ದು ಪಟಾಕಿ ಸಿಡಿತದ ನಂತರ ಕಿಡಿ ವೇದಿಕೆಯ ಪಕ್ಕಕ್ಕೆ ತಗುಲಿ, ಕ್ಷಣಾರ್ಧದಲ್ಲೇ ಬೆಂಕಿ ಹೊತ್ತಿಕೊಂಡು ದಟ್ಟ ಹೊಗೆ ಆವರಿಸಿತು. ಇದರಿಂದ ಸ್ಥಳದಲ್ಲಿದ್ದ ಪ್ರೇಕ್ಷಕರು ಮತ್ತು ಗಣ್ಯರು ಕೆಲಕಾಲ ಗಾಬರಿಗೊಂಡರು.
ಆದರೆ, ಮುನ್ನೆಚ್ಚರಿಕೆಯಾಗಿ ನಿಯೋಜಿಸಲ್ಪಟ್ಟಿದ್ದ ಅಗ್ನಿಶಾಮಕ ದಳದ ಸಿಬ್ಬಂದಿ ತಕ್ಷಣವೇ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದರು. ಸಿಬ್ಬಂದಿಯ ತ್ವರಿತ ಕ್ರಮದಿಂದ ದೊಡ್ಡ ಅನಾಹುತ ತಪ್ಪಿದಂತೆ ಆಗಿದೆ.




