
ನವದೆಹಲಿ: ಕೇಂದ್ರ ಸರ್ಕಾರವು ಕೃಷಿ ಉತ್ಪನ್ನಗಳ ಮಾರಾಟದಲ್ಲಿ ದಲ್ಲಾಳಿಗಳ ಹಾವಳಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಎಲ್ಲಾ ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ‘ರೈತರ ಆದಾಯ ಹೆಚ್ಚಿಸಲು ಅವರಿಂದಲೇ ನೇರವಾಗಿ ಉತ್ಪನ್ನಗಳನ್ನು ಖರೀದಿಸಿ. ಮಧ್ಯವರ್ತಿಗಳಿಂದ ಖರೀದಿಸಬೇಡಿ’ ಎಂದು ಸಲಹೆ ನೀಡಿದೆ.
ಕಾರ್ಯಕ್ರಮವೊಂದರಲ್ಲಿ ಈ ಬಗ್ಗೆ ಮಾತನಾಡಿದ ಕೃಷಿ ಇಲಾಖೆಯ ಕಾರ್ಯದರ್ಶಿ ದೇವೇಶ್ ಚತುರ್ವೇದಿ ‘ಬೆಳೆಗಾರರ ಆದಾಯ ಹೆಚ್ಚಿಸಲು ರೈತ ಉತ್ಪಾದಕ ಸಂಸ್ಥೆಗಳಿಂದ (ಎಫ್‌ಪಿಒ) ನೇರವಾಗಿ ಉತ್ಪನ್ನಗಳನ್ನು ಖರೀದಿಸಿ. ದೇಶಾದ್ಯಂತ ಸಾಕಷ್ಟು ಸಂಖ್ಯೆಯ ಹೋಟೆಲ್, ರೆಸ್ಟೋರೆಂಟ್‌ಗಳಿದ್ದು ಸಾಧ್ಯವಾದರೆ ಆಹಾರ, ತರಕಾರಿಗಳು, ಮಸಾಲೆಗಳು ಮತ್ತು ಇತರ ವಸ್ತುಗಳನ್ನು ಸ್ಥಳೀಯ ಕೃಷಿಕರಿಂದಲೇ ಖರೀದಿ ಮಾಡಿ. ಸ್ಥಳೀಯ ಮಂಡಿಗಳಿಂದ ಅಥವಾ ಚಿಲ್ಲರೆ ವ್ಯಾಪಾರಿಗಳ ಬಳಿ ಖರೀದಿಸುವುದಕ್ಕಿಂತ ಎಫ್‌ಪಿಒಗಳಿಂದ ನೇರವಾಗಿ ಖರೀದಿಸಲು ಪ್ರಾರಂಭಿಸಿ’ ಎಂದು ಹೇಳಿದ ಅವರು ಕೃಷಿಕರೊಂದಿಗಿನ ನೇರ ಪಾಲುದಾರಿಕೆಯು ಬೆಲೆ ಅಂತರವನ್ನು ಕಡಿಮೆ ಮಾಡುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.






















































