
ಇಸ್ಲಾಮಾಬಾದ್: ಪಾಕಿಸ್ತಾನ ಸೇನಾ ಮುಖ್ಯಸ್ಥ ಆಸಿಮ್ ಮುನೀರ್ ಏಪ್ರಿಲ್ 22 ರಂದು 26 ಜನರನ್ನು ಬಲಿತೆಗೆದುಕೊಂಡ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಸಿಂಧೂ ಜಲ ಒಪ್ಪಂದವನ್ನು ಸ್ಥಗಿತಗೊಳಿಸುವ ಭಾರತದ ಇತ್ತೀಚಿನ ನಿರ್ಧಾರವನ್ನು ಉಲ್ಲೇಖಿಸಿ ಮಾತನಾಡಿದ್ದು ಸಿಂಧೂ ಜಲ ಒಪ್ಪಂದದಲ್ಲಿ ಭಾರತದ ಪ್ರಾಬಲ್ಯವನ್ನು ಎಂದೂ ಒಪ್ಪುವುದಿಲ್ಲ, ಭಾರತದ ಎದುರು ಪಾಕಿಸ್ತಾನ ತಲೆ ಬಾಗುವುದಿಲ್ಲ, ನೀರಿನ ವಿಚಾರದಲ್ಲಿ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.
ಪಹಲ್ಗಾಮ್ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆ ತೀವ್ರವಾಗಿ ಹೆಚ್ಚಾಗಿ ಭಾರತವು ಮೇ 7 ರಂದು ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕ ಮೂಲಸೌಕರ್ಯಗಳ ಮೇಲೆ ಆಪರೇಷನ್ ಸಿಂಧೂರ್ ನಡೆಸಿತ್ತು.
ಪಾಕಿಸ್ತಾನವು ಮೇ 8, 9 ಮತ್ತು 10 ರಂದು ದಾಳಿ ಮಾಡಲು ಪ್ರಯತ್ನಿಸಿದ್ದು ಆದರೆ ಭಾರತೀಯ ಸಶಸ್ತ್ರ ಪಡೆಗಳು ಅವುಗಳನ್ನು ಯಶಸ್ವಿಯಾಗಿ ತಟಸ್ಥಗೊಳಿಸಿದವು.
ಸಿಂಧೂ ನದಿ ನೀರು ಒಪ್ಪಂದದ ಪ್ರಕಾರ, ನದಿ ನೀರನ್ನು ಭಾರತ ಮತ್ತು ಪಾಕಿಸ್ತಾನದ ನಡುವೆ ವಿಂಗಡಿಸಲಾಗಿದೆ. ಭಾರತವು ಪಾಕಿಸ್ತಾನಕ್ಕೆ ನೀರು ಹರಿಸುವುದನ್ನು ನಿಲ್ಲಿಸುವ ಸುಳಿವು ನೀಡಿದ ನಂತರ ಇಸ್ಲಾಮಾಬಾದ್‌ನಲ್ಲಿ ಕಳವಳ ಹೆಚ್ಚುತ್ತಿದ್ದು ಇಂತಹ ಪರಿಸ್ಥಿತಿಯಲ್ಲಿ, ಪಾಕಿಸ್ತಾನಿ ನಾಯಕರು ಮತ್ತು ಸೇನಾ ಅಧಿಕಾರಿಗಳು ಈ ಬಗ್ಗೆ ನಿರಂತರವಾಗಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಪಾಕಿಸ್ತಾನ ಭಯೋತ್ಪಾದನೆಗೆ ಪ್ರಾಯೋಜಕತ್ವ ನೀಡುವುದನ್ನು ನಿಲ್ಲಿಸುವವರೆಗೆ ಒಪ್ಪಂದವು ಸ್ಥಗಿತಗೊಳ್ಳುತ್ತದೆ ಎಂದು ಭಾರತ ಹೇಳಿದೆ.





