ಶಿಕ್ಷಣ.ಆರೋಗ್ಯ,ಸಮಾಜ ಸೇವೆ ಕ್ಷೇತ್ರಕ್ಕೆ ತುಂಬಲಾರದ ನಷ್ಟ, ಸೇವೆ ಸಾಧನೆಗಳು ಸ್ಮರಣೀಯ
ಶಾಸಕ ವಿ. ಸುನಿಲ್ ಕುಮಾರ್ ಸಂತಾಪ

ಶಿಕ್ಷಣವೆಂಬ ಯಜ್ಞದಲ್ಲಿ ಸಮಿದೆಯಂತೆ ಉರಿದು ಸಾವಿರಾರು ಮಂದಿಯ ಬಾಳಲ್ಲಿ ಬೆಳಕಾದವರು, ಕಾರ್ಕಳದ ನಿಟ್ಟೆ ಗ್ರಾಮದ ಹೆಸರನ್ನು ವಿಶ್ವದಾದ್ಯಂತ ಹರಡುವಂತೆ ಮಾಡಿದ ಶ್ರೀ ಎನ್. ವಿನಯ್ ಹೆಗ್ಡೆ ಯವರು ಇನ್ನಿಲ್ಲ ಎಂಬುದು ಸುದ್ದಿ ತಿಳಿದು ಅತ್ಯಂತ ಆಘಾತವಾಯಿತು .
ನಿಟ್ಟೆ ವಿದ್ಯಾ ಸಂಸ್ಥೆಯ ಅಧ್ಯಕ್ಷರು, ನಿಟ್ಟೆ ಯೂನಿವರ್ಸಿಟಿಯ ಕುಲಪತಿಗಳು, ಲೆಮಿನಾ ಇಂಡಸ್ಟ್ರಿಯ ಸ್ಥಾಪಕರಾಗಿ ಸಾವಿರಾರು ಮಂದಿಗೆ ಅನ್ನ ನೀಡಿದ ಅನ್ನದಾತ, ಆರೋಗ್ಯ, ಧಾರ್ಮಿಕ ಹಾಗೂ ಸಮಾಜ ಸೇವಾ ಕ್ಷೇತ್ರಗಳಲ್ಲಿ ಅಪಾರ ಕೊಡುಗೆ ನೀಡಿದ ಕೊಡುಗೈ ದಾನಿಯಾಗಿ ಬದುಕಿದ್ದ ಧೀಮಂತ ವ್ಯಕ್ತಿ ಶ್ರೀಯುತರು. ವಿನಯ ಹೆಗ್ಡೆ ಅವರ ನಿಧನವು ಶಿಕ್ಷಣ, ಆರೋಗ್ಯ, ಸಮಾಜ ಸೇವೆ ಸೇರಿದಂತೆ ಎಲ್ಲಾ ಕ್ಷೇತ್ರಗಳಿಗೆ ತುಂಬಲಾರದ ನಷ್ಟವಾಗಿದ್ದು, ಅವರ ಸೇವೆ ಮತ್ತು ಸಾಧನೆಗಳು ಸದಾ ಸ್ಮರಣೀಯವಾಗಿವೆ. ಅವರ ಆದರ್ಶ ಜೀವನ ಮುಂದಿನ ಪೀಳಿಗೆಗೆ ಪ್ರೇರಣೆಯಾಗಿ ಉಳಿಯಲಿದೆ.
ಅಗಲಿದ ಅವರ ಆತ್ಮಕ್ಕೆ ಚಿರಶಾಂತಿ ದೊರಕಲಿ, ಕುಟುಂಬವರ್ಗ ಹಾಗೂ ಅಪಾರ ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿ ಭಗವಂತ ಕರುಣಿಸಲಿ ಎಂದು ಕಾರ್ಕಳ ಶಾಸಕರು, ಮಾಜಿ ಸಚಿವರಾದ ವಿ ಸುನಿಲ್ ಕುಮಾರ್ ರವರು ಸಂತಾಪ ವ್ಯಕ್ತಪಡಿಸಿದ್ದಾರೆ.





