
ಬೆಂಗಳೂರು: ಡಿಸಿಎಂ ಡಿಕೆ ಶಿವಕುಮಾರ್ ಅವರು ಸದಾಶಿವನಗರದ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿ ‘ಸಾರ್ವಜನಿಕರೇ ರಸ್ತೆಗುಂಡಿಗಳನ್ನು ಗಮನಿಸಿ ಸರ್ಕಾರಕ್ಕೆ ತಿಳಿಸುವ ವ್ಯವಸ್ಥೆ ಇಡೀ ದೇಶದಲ್ಲಿ ಎಲ್ಲಾದರೂ ಇದ್ದರೆ ಅದು ಕರ್ನಾಟಕದಲ್ಲಿ ಮಾತ್ರ’ ಎಂದು ಹೇಳಿದರು.
ರಸ್ತೆ ಕಾಮಗಾರಿಗಳ ಗುಣಮಟ್ಟ ಹಾಗೂ ಕಾಮಗಾರಿ ನಡೆದ ಸ್ಥಳಗಳಲ್ಲಿ ಮತ್ತೆ ರಸ್ತೆಗಳು ಹಾಳಾಗಿರುವ ಆರೋಪದ ಕುರಿತು ಮಾತನಾಡಿದ ಡಿಕೆಶಿ ‘ಇದೆಲ್ಲವೂ ಸುಳ್ಳು ಆರೋಪಗಳು, ರಸ್ತೆಗುಂಡಿಗಳ ದುರಸ್ತಿ ಕೆಲಸ ನಿರಂತರ ಪ್ರಕ್ರಿಯೆ. ಗುಣಮಟ್ಟ ಪರಿಶೀಲನೆ ನಡೆಸುವ ಸಲುವಾಗಿ ನಗರ ಪ್ರದಕ್ಷಿಣೆ ಮಾಡಲಾಗುತ್ತಿದೆ. ನಾವು ನಮ್ಮ ಪಾಲಿನ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುತ್ತಿದ್ದೇವೆ.ಇದರಲ್ಲಿ ಯಾವುದೇ ಅನುಮಾನ ಬೇಡ. ಕೇವಲ ಗುಂಡಿಗಳನ್ನು ಮಾತ್ರ ಮುಚ್ಚದೆ ಅದರ ಸುತ್ತಲೂ ಅಚ್ಚುಕಟ್ಟಾಗಿ ಡಾಂಬರು ಹಾಕಿ ಗಟ್ಟಿ ಮಾಡಲಾಗುತ್ತಿದೆ. ಕೆಲವೊಂದು ಕಡೆ ಸುತ್ತಲಿನ ಮೇಲ್ಪದರವನ್ನೂ ಸಹ ದುರಸ್ತಿ ಮಾಡಲಾಗುತ್ತಿದೆ ಎಂದು ಹೇಳಿದರು.



















