ಕಾರ್ಕಳ ಸಾಹಿತ್ಯ ಸಂಘದಲ್ಲಿ, “ಮಂಕುತಿಮ್ಮನ ಕಗ್ಗದಲ್ಲಿ ಜೀವನ ದರ್ಶನ” ವಿಶೇಷ ಉಪನ್ಯಾಸ

ಕಾರ್ಕಳ:-ಭವಿಷ್ಯದ ಬಗ್ಗೆ ಅತಂಕಪಟ್ಟು ಇಂದಿನ ದಿನವನ್ನು ಹಾಳುಮಾಡದೆ ಸಕಾರಾತ್ಮಕವಾಗಿ ಯೋಚಿಸಿ ಜೀವನದಲ್ಲಿ ಮುನ್ನಡೆಯಬೇಕು. ಕಷ್ಟ,ನೋವು ಮತ್ತು ಸಮಸ್ಯೆಗಳು ಬದುಕಿನಲ್ಲಿ ನಮ್ಮನ್ನು ಗಟ್ಟಿಗೊಳಿಸುತ್ತವೆ. ಪ್ರಚಾರ, ಪ್ರತಿಷ್ಠೆ ಹಾಗೂ ಆಡಂಬರದ ಬದುಕಿಗೆ ಮಾರುಹೋಗದೆ ಅಂತರಂಗದ ಅರವಿನೊಂದಿಗೆ ವಾಸ್ತವದಲ್ಲಿ ಬದುಕಬೇಕು.ಪ್ರತಿ ವ್ಯಕ್ತಿಯಲ್ಲಿರುವ ದೈವಿಕತೆಯನ್ನು ಜಾಗೃತಿಗೊಳಿಸಿ ಸತ್ಪಥದಲ್ಲಿ ನಡೆದರೆ ಪ್ರತಿಯೊಬ್ಬರು ದೇವರಾಗಬಹುದು. ಮನಸ್ಸು ಹಾಗೂ ಇಂದ್ರಿಯಗಳನ್ನು ಹತೋಟಿಯಲ್ಲಿ ಇಟ್ಟುಕೊಂಡು ವ್ಯವಹಾರಿಕವಾಗಿ ಚಿಂತಿಸದೆ ಭಾವನಾತ್ಮಕವಾಗಿ ವಿವೇಚಿಸಿ ಸನ್ಮಾರ್ಗದಲ್ಲಿ ನಡೆದಾಗ ಸಾರ್ಥಕ ಜೀವನ ನಮ್ಮದಾಗುತ್ತದೆ ಎನ್ನುವ ಮಂಕುತಿಮ್ಮನ ಕಗ್ಗದ ಆದರ್ಶಗಳು ಸಾರ್ಥಕ ಬದುಕಿನ ದಾರಿದೀಪ ಎಂದು ಕಾರ್ಕಳ ತಾಲೂಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೊಂಡಳ್ಳಿ ಪ್ರಭಾಕರ ಶೆಟ್ಟಿ ಹೇಳಿದರು. ಅವರು ಕಾರ್ಕಳದ ಸಾಹಿತ್ಯ ಸಂಘದಲ್ಲಿ ಮಂಕುತಿಮ್ಮನ ಕಗ್ಗದಲ್ಲಿ ಜೀವನ ದರ್ಶನ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು.
ವೇದಿಕೆಯಲ್ಲಿ ಸಾಹಿತ್ಯ ಸಂಘದ ಕೋಶಾಧಿಕಾರಿ ನಿತ್ಯಾನಂದ ಪೈ, ನಿವೃತ್ತ ಇಸ್ರೊ ವಿಜ್ಞಾನಿ ಜನಾರ್ದನ ಇಡ್ಯ, ಸಾಹಿತ್ಯ ಸಂಘದ ಪದಾಧಿಕಾರಿಗಳಾದ ಬೇಬಿ ಈಶ್ವರಮಂಗಲ, ಶಿವಸುಬ್ರಹ್ಮಣ್ಯ ಭಟ್ ಉಪಸ್ಥಿತರಿದ್ದರು. ಕಾರ್ಯಕ್ರಮ ಅಧ್ಯಕ್ಷತೆಯನ್ನು ವಹಿಸಿದ್ದ ನಿವೃತ್ತ ಪ್ರಚಾರ್ಯ ಗೋವಿಂದ ಪ್ರಭು ಪ್ರಾಸ್ತಾವಿಕ ನುಡಿಯೊಂದಿಗೆ ಸ್ವಾಗತಿಸಿದರು.ವಿದ್ವಾನ ಅನಂತಪದ್ಮನಾಭ ಭಟ್ ಪ್ರಾರ್ಥಿಸಿ, ಸಾಹಿತ್ಯ ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯೆ ವೃಂದ ಹರಿಪ್ರಕಾಶ್ ಶೆಟ್ಟಿ ನಿರೂಪಿಸಿ ಸಾಹಿತ್ಯ ಸಂಘದ ಪ್ರಧಾನ ಕಾರ್ಯದರ್ಶಿ ಪದ್ಮನಾಭ ಗೌಡರು ವಂದಿಸಿದರು.