
ನವದೆಹಲಿ : ದೆಹಲಿಯಲ್ಲಿ ಶುಕ್ರವಾರ ನಡೆದ ‘ಭಾಗಿದಾರ್ ನ್ಯಾಯ್ ಸಮ್ಮೇಳನ’ದಲ್ಲಿ ಪಾಲ್ಗೊಂಡು ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು ದೇಶದಲ್ಲಿ ಜಾತಿಗಣತಿಗೆ ಒತ್ತಾಯಿಸಿದ್ದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ. ಅವರ ನಿರಂತರ ಒತ್ತಡದಿಂದ ಕೇಂದ್ರ ಸರ್ಕಾರ ಈ ಕೆಲಸಕ್ಕೆ ಮುಂದಾಗಿದ್ದು ಈಗ ಕೇಂದ್ರ ನ್ಯಾಯಯುತವಾಗಿ ಜಾತಿಗಣತಿ ನಡೆಸಲಿ ಎಂದು ಆಗ್ರಹಿಸಿದ್ದಾರೆ.
ರಾಹುಲ್ ಗಾಂಧಿಯವರು ನಿಜವಾದ ನ್ಯಾಯ ಯೋಧರಾಗಿ ಹೊರಹೊಮ್ಮಿದ್ದಾರೆ. ಭಾರತ ಜೋಡೋ ಯಾತ್ರೆ ಮತ್ತು ಭಾರತ ಜೋಡೋ ನ್ಯಾಯ ಯಾತ್ರೆಯ ಸಮಯದಲ್ಲಿ ದೇಶದಾದ್ಯಂತ ಅವರು ಪ್ರಯಾಣಿಸಿದ್ದಾರೆ. ಅವರ ಯಾತ್ರೆ ಅಧಿಕಾರಕ್ಕಾಗಿ ಆಗಿರಲಿಲ್ಲ. ಬದಲಿಗೆ ಜನರ ಧ್ವನಿಗಳನ್ನು ಆಲಿಸಲು ಯಾತ್ರೆ ಮಾಡಿದರು. ಶೋಷಣೆಯ ಅಂಚಿನಲ್ಲಿರುವ ಜನರಿಗೆ ಧ್ವನಿಯನ್ನು ನೀಡಿದರು. ಜಾತಿಗಣತಿಗಾಗಿ ಮತ್ತು ಸಮಾನತೆಗಾಗಿ ಅವರು ನಡೆಸಿದ ನಿರಂತರ ಹೋರಾಟ, ಬಿಜೆಪಿಯನ್ನು ಒಳನಿಷ್ಠೆಯಿಂದಲ್ಲದಿದ್ದರೂ ಒತ್ತಡದಿಂದ ಪ್ರತಿಕ್ರಿಯಿಸುವಂತೆ ಮಾಡಿದೆ ಎಂದು ಹೇಳಿದರು.
ಡಾ.ಅಂಬೇಡ್ಕರ್ ಹೇಳಿದಂತೆ, ‘ನ್ಯಾಯವು ರಾಷ್ಟ್ರದ ಆತ್ಮವಾಗಿದೆ.’ ಇಂದು ಆ ಆತ್ಮವು ತಾರತಮ್ಯ ಮತ್ತು ಅಸಮಾನತೆಯ ವಿರುದ್ಧ ಕೂಗುತ್ತಿದೆ. ಈ ಸಮ್ಮೇಳನವು ನಮ್ಮ ಉತ್ತರವಾಗಿರುವುದಲ್ಲದೆ , ಎಲ್ಲ ಜಾತಿ-ವರ್ಗದವರಿಗೂ ಸಮಾನ ಭಾಗವಹಿಸುವಿಕೆಯ ಸ್ಥಾನ ಸಿಗುವವರೆಗೆ ನಾವು ವಿಶ್ರಾಂತಿ ಪಡೆಯುವುದಿಲ್ಲ ಎಂಬ ಪ್ರತಿಜ್ಞೆಯೂ ಆಗಿದೆ ಎಂದು ಹೇಳಿದರು.





