ನ್ಯಾಯಾಲಯದ ಆದೇಶ ಪಾಲಿಸದ, ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಯೋಗೀಶ್ ನಯನ್ ಇನ್ನಾ
ಕಾರ್ಕಳ ನ್ಯಾಯಾಲಯದಿಂದ ಬಂಧನದ ವಾರೆಂಟ್ ಜಾರಿ

ಕಾರ್ಕಳ: ಸಾಮಾಜಿಕ ಜಾಲತಾಣದಲ್ಲಿ ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಅವರ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ನ್ಯಾಯಾಲಯದ ಆದೇಶ ಪಾಲಿಸದ ಆರೋಪಿ ಯೋಗಿಶ್ ನಯನ್ ಇನ್ನಾ ವಿರುದ್ಧ ಕಾರ್ಕಳ ನ್ಯಾಯಾಲಯವು ಬಂಧನದ ವಾರೆಂಟ್ ಜಾರಿ ಮಾಡಿದೆ.
ಪ್ರಕರಣದ ಹಿನ್ನೆಲೆ..
ಕಾರ್ಕಳ ತಾಲೂಕಿನ ಇನ್ನಾ ಗ್ರಾಮದ ನಿವಾಸಿ ಯೋಗಿಶ್ ನಯನ್ ಮತ್ತು ಹಿರ್ಗಾನದ ರಾಧಾಕೃಷ್ಣ ನಾಯಕ್ ಎಂಬುವವರು ಫೇಸ್ಬುಕ್ನಲ್ಲಿ ಶಾಸಕರ ವಿರುದ್ಧ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದರು. “ಕೋವಿಡ್ ಸಮಯದಲ್ಲಿ ಶಾಸಕರು ಬಂಡವಾಳಶಾಹಿಗಳ ಹಾಗೂ ಗೇರು ಬೀಜ ಕಂಪನಿಗಳ ಪರವಾಗಿ ಕೆಲಸ ಮಾಡುತ್ತಿದ್ದಾರೆ ಮತ್ತು ಜನಸಾಮಾನ್ಯರ ಕಷ್ಟಕ್ಕೆ ಸ್ಪಂದಿಸುತ್ತಿಲ್ಲ” ಎಂಬರ್ಥದ ಬರಹಗಳನ್ನು ಪ್ರಕಟಿಸಲಾಗಿತ್ತು. ಇದರಿಂದ ತಮ್ಮ ಗೌರವಕ್ಕೆ ಧಕ್ಕೆಯಾಗಿದೆ ಎಂದು ಶಾಸಕ ಸುನಿಲ್ ಕುಮಾರ್ ಬೆಂಗಳೂರಿನ ಸಿವಿಲ್ ನ್ಯಾಯಾಲಯದಲ್ಲಿ ಮಾನಹಾನಿ ದಾವೆ ಹೂಡಿದ್ದರು.
ನ್ಯಾಯಾಲಯದ ತೀರ್ಪು ಮತ್ತು ಉಲ್ಲಂಘನೆ.
2023ರ ಜನವರಿ 7ರಂದು ತೀರ್ಪು ನೀಡಿದ್ದ ಬೆಂಗಳೂರಿನ 12ನೇ ಹೆಚ್ಚುವರಿ ಸಿಟಿ ಸಿವಿಲ್ ನ್ಯಾಯಾಲಯವು, ಇಬ್ಬರೂ ಪ್ರತಿವಾದಿಗಳು ಶಾಸಕರಲ್ಲಿ ಬೇಷರತ್ ಕ್ಷಮೆಯಾಚಿಸಬೇಕು ಮತ್ತು ನಷ್ಟ ಪರಿಹಾರ ನೀಡಬೇಕು ಎಂದು ಆದೇಶಿಸಿತ್ತು.
ರಾಧಾಕೃಷ್ಣ ನಾಯಕ್ ಪಾಲನೆ
ಈ ಆದೇಶದಂತೆ ಮತ್ತೊಬ್ಬ ಆರೋಪಿ ರಾಧಾಕೃಷ್ಣ ನಾಯಕ್ ಅವರು ಈಗಾಗಲೇ ನ್ಯಾಯಾಲಯಕ್ಕೆ ಹಾಜರಾಗಿ ಕ್ಷಮೆಯಾಚಿಸಿ, ಪರಿಹಾರದ ಮೊತ್ತವನ್ನು ಪಾವತಿಸಿದ್ದಾರೆ.
ಯೋಗಿಶ್ ನಯನ್ ನಿರ್ಲಕ್ಷ್ಯ
ಆದರೆ ಯೋಗಿಶ್ ನಯನ್ ಅವರು ನ್ಯಾಯಾಲಯದ ಸೂಚನೆಯನ್ನು ಪಾಲಿಸದ ಹಿನ್ನೆಲೆಯಲ್ಲಿ, ಶಾಸಕರು ನ್ಯಾಯಾಲಯದ ಆದೇಶ ಜಾರಿಗಾಗಿ (Execution Petition) ಅರ್ಜಿ ಸಲ್ಲಿಸಿದ್ದರು.
ಬಂಧನಕ್ಕೆ ಆದೇಶ
ಪ್ರಕರಣವು ಕಾರ್ಕಳದ ಪ್ರಧಾನ ಸಿವಿಲ್ ನ್ಯಾಯಾಲಯಕ್ಕೆ ವರ್ಗಾವಣೆಯಾದ ನಂತರ, ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಕೋಮಲ ಆರ್.ಸಿ. ಅವರು, ನ್ಯಾಯಾಲಯದ ಆದೇಶವನ್ನು ಗೌರವಿಸದ ಯೋಗಿಶ್ ನಯನ್ ಇನ್ನಾ ಅವರನ್ನು ಬಂಧಿಸಿ ಹಾಜರುಪಡಿಸುವಂತೆ ಆದೇಶ ಹೊರಡಿಸಿದ್ದಾರೆ.



















