
ಬೆಂಗಳೂರು: ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಬೆಳಗಾವಿಯಲ್ಲಿ ಶಾಲಾ ಕೊಠಡಿಗಾಗಿ ಪ್ರತಿಭಟನೆ ಮಾಡಿದ ಶಿಕ್ಷಕನನ್ನು ಅಮಾನತು ಮಾಡಿರುವ ವಿಚಾರಕ್ಕೆ ವಿಧಾನಸೌಧದಲ್ಲಿ ಪ್ರತಿಕ್ರಿಯಿಸಿ ಸರ್ಕಾರಿ ನೌಕರರಿಗೆ ಪ್ರತಿಭಟನೆ ಮಾಡಲು ಅವಕಾಶ ಇಲ್ಲ. ನನ್ನ ಇಲಾಖೆಯಲ್ಲಿ ಇಂತಹದ್ದನ್ನ ಸಹಿಸೋಕೆ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಸರ್ಕಾರಿ ನೌಕರರಿಗೆ ಕಾನೂನು ಇದೆ. ಇಂತಹ ಸಮಸ್ಯೆ ಇದ್ದರೆ ಇಲಾಖೆ, ಬಿಇಓ, ಡಿಡಿಪಿಐಗಳ ಗಮನಕ್ಕೆ ತರಬೇಕು. ಏಕಾಏಕಿ ಪ್ರತಿಭಟನೆ ಮಾಡೋದು ಸರಿಯಲ್ಲ. ನನ್ನ ಇಲಾಖೆಯಲ್ಲಿ ಇದಕ್ಕೆ ಅವಕಾಶ ಇಲ್ಲ. ನಾವು ಬಿಲ್ಡಿಂಗ್ ಕೊಟ್ಟಿರೋದು ಅವರಿಗೆ ಗೊತ್ತಿದೆ. ಗೊತ್ತಿದ್ದು ಹೀಗೆ ಪ್ರತಿಭಟನೆ ಮಾಡಿದ್ದಾರೆ. ಹೀಗಾಗಿ ಬಿಇಓ ಅಮಾನತು ಮಾಡಿ ಆದೇಶ ಮಾಡಿದ್ದಾರೆ. ಅನೇಕರು ನನಗೆ ಅಮಾನತು ವಾಪಸ್ ಪಡೆದುಕೊಳ್ಳಿ ಎಂದು ಸಲಹೆ ನೀಡಿದ್ದು ಈಗ ಅಮಾನತು ವಾಪಸ್ ಪಡೆಯಬೇಕು ಅಂತ ಕಡತ ತರಿಸಿದ್ದೇನೆ. ಪರಿಶೀಲನೆ ಮಾಡಿ ಮುಂದಿನ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ವಿವರಿಸಿದ್ದಾರೆ.






















































