
ಮುಂಬೈ: ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದಲ್ಲಿ ನಡೆದ ಸಿಜೆಪಿಯ ಕಾರ್ಯತಂತ್ರ ಸಭೆಯಲ್ಲಿ ಮಾತನಾಡಿದ ಸಂಸ್ಥಾಪಕ ಅಭಿಜೀತ್ ದೀಪ್ಕೆ ಕಾಕ್ರೋಚ್ ಜನತಾ ಪಾರ್ಟಿ (CJP) ಸದ್ಯಕ್ಕೆ ಚುನಾವಣಾ ರಾಜಕೀಯಕ್ಕೆ ಕಾಲಿಡುವುದಿಲ್ಲ ಎಂದು ತಿಳಿಸಿದ್ದಾರೆ.
ರಾಜಕೀಯ ಪಕ್ಷವಾಗಿ ಕಾರ್ಯನಿರ್ವಹಿಸುವ ಬದಲು ಜನರ ಸಮಸ್ಯೆಗಳ ಕುರಿತು ಸರ್ಕಾರದ ಮೇಲೆ ಒತ್ತಡ ಹೇರುವ ಒತ್ತಡದ ಗುಂಪು (Pressure Group) ಆಗಿ ಕೆಲಸ ಮಾಡುವುದಾಗಿ ಹೇಳಿದರು.
“ದೇಶಕ್ಕೆ ಈಗ ಮತ್ತೊಂದು ರಾಜಕೀಯ ಪಕ್ಷಕ್ಕಿಂತ ಜನರ ಧ್ವನಿಯನ್ನು ಬಲವಾಗಿ ಪ್ರತಿನಿಧಿಸುವ ಒತ್ತಡದ ಗುಂಪಿನ ಅಗತ್ಯವಿದೆ. ಆದ್ದರಿಂದ ಸದ್ಯಕ್ಕೆ ಸಿಜೆಪಿ ಒತ್ತಡದ ಗುಂಪಾಗಿ ಕಾರ್ಯನಿರ್ವಹಿಸಲಿದೆ” ಎಂದು ಅವರು ಸ್ಪಷ್ಟಪಡಿಸಿದರು.
ಸಿಜೆಪಿಯ ಮುಖ್ಯ ವಕ್ತಾರ ಸೌರವ್ ದಾಸ್ ಮಾತನಾಡಿ, ಹೋರಾಟಗಾರ ಸೋನಂ ವಾಂಗ್‌ಚುಕ್ ಈ ಚಳವಳಿಗೆ ಮಾರ್ಗದರ್ಶನ ನೀಡಲಿದ್ದು, ಪ್ರಮುಖ ವಿಷಯಗಳಲ್ಲಿ ಅವರ ಸಲಹೆ ಪಡೆಯಲಾಗುವುದು ಎಂದರು.
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಪರೀಕ್ಷಾ ಅಕ್ರಮಗಳ ವಿರುದ್ಧ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಗಳನ್ನು ಹಿಂಪಡೆಯುವಂತೆ ಸರ್ಕಾರವನ್ನು ಒತ್ತಾಯಿಸಲಾಗುವುದು. ಈ ಕುರಿತು ಸರ್ಕಾರದೊಂದಿಗೆ ಮಾತುಕತೆ ನಡೆಯುತ್ತಿದೆ. ಅಲ್ಲದೇ ವಿದ್ಯಾರ್ಥಿ ಪ್ರತಿಭಟನೆಗಳಲ್ಲಿ ಗಾಯಗೊಂಡವರಿಗೆ ಕಾನೂನು ಮತ್ತು ವೈದ್ಯಕೀಯ ನೆರವು ನೀಡುವ ಕಾರ್ಯವನ್ನು ಸಂಘಟನೆ ಮುಂದುವರಿಸಲಿದೆ ಎಂದು ಅವರು ತಿಳಿಸಿದರು.
ಸಭೆಯಲ್ಲಿ ಮಾಧ್ಯಮ ಮತ್ತು ನ್ಯಾಯಾಂಗದ ಮೇಲಿನ ಜನರ ನಂಬಿಕೆ ಕುಸಿತ, ಎಥನಾಲ್ ಮಿಶ್ರಿತ ಇಂಧನ, ನಿರುದ್ಯೋಗ ಸೇರಿದಂತೆ ಹಲವು ಪ್ರಮುಖ ವಿಷಯಗಳ ಬಗ್ಗೆ ಚರ್ಚೆ ನಡೆಯಲಿದೆ.

























































