
ಬೆಂಗಳೂರು: ಕಳೆದ ಒಂದು ವಾರದಿಂದ ಮಕ್ಕಳು ಬೇಸಿಗೆ ರಜೆ ಮುಗಿಸಿ ಮರಳಿ ಶಾಲೆಗೆ ವಾಪಸ್ ಆಗಿದ್ದು ಆದರೆ ಶಾಲೆ ಶುರುವಾದರೂ ಮಕ್ಕಳಿಗೆ ಸಿಗಬೇಕಿದ್ದ ಉಚಿತ ಶೂ ಸಾಕ್ಸ್ ಇನ್ನು ಕೈ ತಲುಪಿಲ್ಲ. ಶಿಕ್ಷಣ ಇಲಾಖೆಯ ನಿರ್ಲಕ್ಷದ ಕುರಿತು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶೈಕ್ಷಣಿಕ ವರ್ಷ ಆರಂಭವಾದರೂ ಸರ್ಕಾರ ಶಾಲಾ ಮಕ್ಕಳಿಗೆ ನೀಡಬೇಕಾದ ಮೂಲಭೂತ ಸೌಲಭ್ಯ ಒದುಗಿಸದೇ ಪರದಾಡುವಂತೆ ಮಾಡಿದೆ. ಶಿಕ್ಷಣ ಇಲಾಖೆ ಹೇಳೋದು ಒಂದು ಮಾಡೋದು ಮತ್ತೊಂದು ಎನ್ನುವಂತಾಗಿದೆ ಎಂದು ಪೋಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹಣ ಬಂದ ಮೇಲೆ ಶೂ, ಸಾಕ್ಸ್ ಖರೀದಿ
ಶೂ ಹಾಗೂ ಸಾಕ್ಸ್ ಸ್ಥಳೀಯವಾಗಿ ಖರೀದಿಸಿ ವಿತರಣೆ ಮಾಡುವ ಜವಾಬ್ದಾರಿಯನ್ನು ಆಯಾ ಶಾಲೆಯ ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿಗೆ ವಹಿಸಿದೆ. ಕಳೆದ ವರ್ಷ ಶೂ ಹಾಗೂ ಸಾಕ್ಸ್ ಖರೀದಿಗೆ 1 ರಿಂದ 5ನೇ ತರಗತಿ ವಿದ್ಯಾರ್ಥಿಗಳಿಗೆ 265 ರೂ., 6 ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ 295 ರೂ. ಹಾಗೂ 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ 325 ರೂ. ನಿಗದಿ ಮಾಡಿತ್ತು. ಆದರೆ ಈ ವರ್ಷ ಇದರ ಹಣವನ್ನು ಶಾಲೆಗೆ ನೀಡಿಲ್ಲ, ಹೀಗಾಗಿ ಶೂ, ಸಾಕ್ಸ್ ಖರೀದಿಗೆ ಸೂಚನೆ ಬಂದಿದೆ, ಆದರೆ ಹಣ ಬಂದಿಲ್ಲ. ಹಣ ಬಂದ ಮೇಲೆ ಖರೀದಿ ಮಾಡುತ್ತೇವೆ ಎಂದು ಶಾಲಾ ಮುಖ್ಯಸ್ಥರು ಹೇಳುತ್ತಿದ್ದು, ಶಾಲಾ ಶಿಕ್ಷಣ ಆಯುಕ್ತ ತ್ರೀಲೋಕ್ ಚಂದ್ರ, ಸ್ಥಳೀಯವಾಗಿ ಶೂ, ಸಾಕ್ಸ್ ಖರೀದಿಗೆ ಸಿದ್ಧತೆ ಮಾಡಿದ್ದು ಹಣ ಬಿಡುಗಡೆ ಮಾಡುತ್ತೇವೆ ಎಂದು ಹೇಳಿದ್ದಾರೆ.






















































