
ಮಂಗಳೂರು: ಶಿಕ್ಷಣ ಇಲಾಖೆಯು ನಾಡಿನ ವಿಭಿನ್ನ ಕಲೆ-ಸಂಸ್ಕೃತಿಗಳನ್ನು ಶಾಲಾ ಮಕ್ಕಳಿಗೆ ಪರಿಚಯಿಸುವ ನಿಟ್ಟಿನಲ್ಲಿ ಶಾಲೆಗಳಲ್ಲಿ ರಂಗೋತ್ಸವ ಎಂಬ ಮನೋರಂಜನ ಕಾರ್ಯಕ್ರಮವನ್ನು ಆಯೋಜಿಸಿದ್ದು ಇದರಲ್ಲಿ ಭೂತಾರಾಧನೆಗೂ ಅವಕಾಶ ನೀಡಿದ ಇಲಾಖೆಯ ವಿರುದ್ಧ ಶಾಸಕ ವೇದವ್ಯಾಸ ಕಾಮತ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೈವಾರಾಧನೆ ಕರಾವಳಿ ಜನರ ನಂಬಿಕೆ, ಅಸ್ಮಿತೆಯ ಪ್ರತೀಕ. ಇದು ಪ್ರದರ್ಶನ ಕಲೆಯಲ್ಲ. ಆದರೆ ಶಿಕ್ಷಣ ಇಲಾಖೆಯು ದೈವರಾದನೆಯನ್ನು ಶಾಲೆಗಳ ರಂಗೋತ್ಸವದಲ್ಲಿ ಪ್ರದರ್ಶನ ಮಾಡಲು ಸುತ್ತೋಲೆ ಹೊರಡಿಸಿದ್ದು ಇಲಾಖೆಯು ತುಳುವರ ನಂಬಿಕೆಯ ವಿರುದ್ಧ ಚೆಲ್ಲಾಟವಾಡುತ್ತಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪನವರ ವಿರುದ್ಧ ಕಿಡಿಕಾರಿದ್ದಾರೆ.
ಈ ಮನೋರಂಜನ ಕಾರ್ಯಕ್ರಮದಲ್ಲಿ ಬೊಂಬೆಯಾಟ, ಕೋಲಾಟ, ಕಂಸಾಳೆ, ಡೊಳ್ಳು ಕುಣಿತ, ವೀರಗಾಸೆ ಮುಂತಾದ ಜನಪದ ಕಲೆಗಳ ಜೊತೆಗೆ ಭೂತಾರಾಧನೆಯನ್ನೂ ಸೇರಿಸಿದೆ. ಆದ್ದರಿಂದ ಭೂತಾರಾಧನೆಯು ವೇದಕೆಯಲ್ಲಿ ಪ್ರದರ್ಶನವಾಗುವ ಸಾಧ್ಯತೆಯಿದ್ದು ಇದರಿಂದ ದೈವಾರಾಧನೆಗೆ ಅಪಪ್ರಚಾರವಾಗುತ್ತದೆ. ತುಳುನಾಡಿನ ಜನರ ನಂಬಿಕೆಗೆ ಘಾಸಿಯಾಗುವುದರಿಂದ ಸರ್ಕಾರ ಕಳುಹಿಸಿದ ಸುತ್ತೋಲೆಯಲ್ಲಿ ದೈವಾರಧನೆಯನ್ನು ಕೈಬಿಡಬೇಕು ಎಂದು ಶಾಸಕ ವೇದವ್ಯಾಸ ಕಾಮತ್ ಆಗ್ರಹಿಸಿದ್ದಾರೆ.