31.4 C
Udupi
Sunday, April 26, 2026
spot_img
spot_img
HomeBlogಶಾರದಾ ಪೂಜಾ ಸಮಿತಿ ಕಾರ್ಕಳ,ಸಾಗಿ ಬಂದ ಹಾದಿಯತ್ತ ಒಂದು ನೋಟ

ಶಾರದಾ ಪೂಜಾ ಸಮಿತಿ ಕಾರ್ಕಳ,ಸಾಗಿ ಬಂದ ಹಾದಿಯತ್ತ ಒಂದು ನೋಟ

“ಯುವ ಶಕ್ತಿಯೊಂದು, ಸನ್ಮಾರ್ಗದಲ್ಲಿ ಸಾಗಿದರೆ ಏನನ್ನು ಸಾಧಿಸಬಹುದು ಎನ್ನುವುದಕ್ಕೆ ನಿದರ್ಶನ……”

ವಸುಧಾ ಶೆಣೈ, ಕಾರ್ಕಳ

ಕಾರ್ಕಳದ ಮಂಜುನಾಥ ಪೈ ಸಭಾಂಗಣದಲ್ಲಿ ನಡೆಯುತ್ತಿರುವ‌ ಶಾರದಾ ಮಹೋತ್ಸವ ತನ್ನ ನಲವತ್ತಾರನೆ ವರುಷದ ಸಂಭ್ರಮದಲ್ಲಿದೆ.ಶಾರದಾ ದೇವಿಯು ಸರ್ವಾಲಂಕಾರ ಭೂಷಿತಳಾಗಿ ಭಕ್ತ ಜನರನ್ನು ತನ್ನತ್ತ ಸೆಳೆದು ಭಾವಪರವಶರನ್ನಾಗಿಸಿ, ಭಕ್ತಿಭಾವದ ಭಾವನೆಯನ್ನು ಪ್ರತಿಯೊಬ್ಬ ಭಕುತರ ಮನದಲ್ಲೂ ಮೂಡಿಸುತ್ತಿದ್ದಾಳೆ.ಐದು ದಿನಗಳಲ್ಲೂ ವಿಧವಿಧ ಅಲಂಕಾರದಿಂದ ಶೋಭಿಸುವ‌ ಶಾರದಾ ಮಾತೆಯ ಸೇವೆಗಾಗಿ ಟೊಂಕಕಟ್ಟಿ ನಿಂತ ಸ್ವಯಂ ಸೇವಕರ ಉತ್ಸಾಹ, ಪುಟ್ಟ ಮಕ್ಕಳಿಂದ ವಯೋವೃದ್ಧರ ತನಕ ಈ ಉತ್ಸವದಲ್ಲಿ ಭಾಗವಹಿಸುವ ಸಂಭ್ರಮ ನೋಡಿದರೆ ಅದೇ ಕಣ್ಣಿಗೊಂದು ಹಬ್ಬ.

ಮುಂದಿನ ನಾಲ್ಕು ವರುಷಗಳಲ್ಲಿ ಸುವರ್ಣ ಮಹೋತ್ಸವದ ಸಂಭ್ರಮದತ್ತ ದಾಪುಗಾಲು ಹಾಕಿ ಸಾಗುತ್ತಿರುವ ಈ ಶಾರದಾ ಪೂಜಾ ಸಮಿತಿಯ ಆರಂಭದ ದಿನಗಳನ್ನು ನೆನಪು ಮಾಡಿದರೆ, ಯುವಶಕ್ತಿಯೊಂದು ಸರಿಯಾದ ಮಾರ್ಗದಲ್ಲಿ ಸಾಗಿದರೆ ಏನನ್ನಾದರೂ ಸಾಧಿಸಬಹುದು ಎಂಬ ಮಾತು ಅದೆಷ್ಟು ನಿಜ ಎಂಬ ಅರಿವಾಗುತ್ತದೆ.

ಪಡುತಿರುಪತಿ ಖ್ಯಾತಿಯ ಕಾರ್ಕಳದ ಜಿ.ಎಸ್.ಬಿ. ಸಮಾಜದಲ್ಲಿ ಮಕ್ಕಳು ಹುಟ್ಟುವಾಗಲೇ ಚಪ್ಪರ ಶ್ರೀನಿವಾಸ ದೇವರ ಸ್ವಯಂ ಸೇವಕರಾಗಿಯೆ ಹುಟ್ಟುತ್ತಾರೆ ಎಂಬ ಮಾತಿದೆ. ಆ ಮಾತು ನಿಜ ಎಂಬುದು ಕಾರ್ಕಳದಲ್ಲಿ‌ ಸಾಬೀತಾಗಿದೆ. ಪಡುತಿರುಪತಿ ದೇವರ ಸನ್ನಿಧಾನದಲ್ಲಿ ದೇವರ ಸೇವೆಯಲ್ಲಿ‌ ನಿರತವಾದ ಸ್ವಯಂ ಸೇವಕರ ಗುಂಪೊಂದು 1975ರಲ್ಲಿ ಜೈಹಿಂದ್ ಗೇಮ್ಸ್ ಕ್ಲಬ್ ಎಂಬ ಸಂಘವೊಂದನ್ನು ಹುಟ್ಟು ಹಾಕಿತು.ವರುಷದಿಂದ ವರುಷಕ್ಕೆ ಸದಸ್ಯರ ಸಂಖ್ಯೆ ಹೆಚ್ಚಿದಂತೆ ಕ್ರೀಡೆಯನ್ನಷ್ಟೆ ಅಲ್ಲದೆ ಸಮಾಜಕ್ಕಾಗಿ ಇನ್ನೇನ್ನನಾದರೂ ಮಾಡಬೇಕೆಂದು ಹಾತೊರೆದ ಸದಸ್ಯರು ಯಾವ ಕಾರ್ಯಕ್ರಮ ಆರಂಭಿಸುವುದು ಎಂಬ ಯೋಚನೆಯಲ್ಲಿದ್ದಾಗ ನವರಾತ್ರಿ ಮಹೋತ್ಸವವೇ ಸರಿಯೆಂಬ ನಿರ್ಧಾರಕ್ಕೆ ಬಂದು ಆ ನಿಟ್ಟಿನಲ್ಲಿ 1979ರಲ್ಲಿ ಇಟ್ಟ ಹೆಜ್ಜೆ ಇಂದು ಕಾರ್ಕಳದ ವೈಭವದ ಶಾರದಾ ಮಹೋತ್ಸವಕ್ಕೆ ಸಾಕ್ಷಿಯಾಗಿದೆ.

1979ರಲ್ಲಿ ಮೊದಲ ವರುಷದ ಶಾರದಾ ಮಹೋತ್ಸವವನ್ನು ಆರಂಭಿಸಿದಾಗ ಅದರ ಸದಸ್ಯರೆಲ್ಲರೂ ಇನ್ನೂ ಹದಿಹರೆಯಕ್ಕೆ ಕಾಲಿಟ್ಟ ತರುಣರು. ಇನ್ನೂ ತಮ್ಮ ವಿದ್ಯಾರ್ಥಿ ದೆಸೆಯಲ್ಲಿರುವ ತರುಣರಿಗೆ ತಮ್ಮ ಸ್ವಂತದಾದ ಉದ್ಯೋಗವಾಗಲಿ,ಹಣಕಾಸಿನ ಸಹಾಯವಾಗಲಿ ಇಲ್ಲದ ಸಮಯದಲ್ಲಿ , ಊರಿನಲ್ಲಿ ಏನಾದರೂ ಹೊಸತೊಂದನ್ನು ಮಾಡಬೇಕೆಂಬ ಉತ್ಸಾಹವೊಂದೆ ಇದ್ದುದು.

ಹಿರಿಯರ ಪ್ರೋತ್ಸಾಹವಿಲ್ಲದೆ, ಗೆಳೆಯರೆಲ್ಲರೂ ಒಂದುಗೂಡಿ ಶ್ರಮವಹಿಸಿ ಆರಂಭಿಸಿದ ಮೊದಲ ವರುಷದ ಶಾರದಾ ಮಹೋತ್ಸವವನ್ನು ನಡೆಸಿದ್ದು ಕಾರ್ಕಳದ ವೀರ ಮಾರುತಿ ದೇವಸ್ಥಾನದ ಹಿಂದುಗಡೆಯ ಬಯಲಿನಲ್ಲಿ. ದುರ್ಗಾ ಗ್ರಾಮದ ನಾರಾಯಣ ಭಟ್ಟರಿಂದ ಮಾಡಿಸಿ ತಂದ ಶಾರದಾ ದೇವಿಯ‌ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜೆಯನ್ನು ಆರಂಭಿಸಿಯೆ ಬಿಟ್ಟದ್ದು ಆ ದಿನಗಳ ಸಾಧನೆ. ಶಾರದಾ ವಿಸರ್ಜನೆಯ ಬಳಿಕ ಲೆಕ್ಕಾಚಾರ ನಡೆದು ಆ ದಿನಗಳ ಬೃಹತ್ ಮೊತ್ತ ಎರಡು ಸಾವಿರ ರೂಪಾಯಿಗಳ ಕೊರತೆ ಕಂಡು ಬಂದಾಗ ಕಂಗಾಲಾದದ್ದು ಅಷ್ಟೇ ಸತ್ಯ. ಆದರೂ ಎದೆಗುಂದದೆ ಸದಸ್ಯರೆಲ್ಲರೂ ಒಟ್ಟಾಗಿ ಆ ಮೊತ್ತವನ್ನು ತುಂಬಿಕೊಟ್ಟು ಮುಂದಿನ ವರುಷಕ್ಕೆ ಅಣಿಯಾಗಿದ್ದದ್ದು ಅವರ ಉತ್ಸಾಹವನ್ನು ತೋರಿಸಿತ್ತು.
ದ್ವಿತೀಯ ವರುಷದ ಶಾರದಾ ಮಹೋತ್ಸವಕ್ಕಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲು ಹೆಚ್ಚು ಸ್ಥಳವಕಾಶದ ಅಗತ್ಯವಿದ್ದುದರಿಂದ ವೆಂಕಟರಮಣ ದೇವಸ್ಥಾನದ ತಟಾಕದ ಬಳಿಯಲ್ಲಿರುವ ಮೈದಾನದಲ್ಲಿ ಚಪ್ಪರ ಹಾಕಿ ದೇವಿಯ ಪ್ರತಿಷ್ಠಾಪನೆಗೆ ಭವ್ಯವಾದ ವೇದಿಕೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗಾಗಿ ಇನ್ನೊಂದು ವೇದಿಕೆಯನ್ನು ನಿರ್ಮಿಸಿದ್ದು ಆ ತರುಣರ ಉತ್ಸಾಹವನ್ನು ತೋರಿ‌ಸುತ್ತಿತ್ತು.ಮಾಳದ ಕಾಡಿನ ನಡುವೆಯಿರುವ ಕುಗ್ರಾಮದಿಂದ ಅಡಿಕೆ ಮರಗಳನ್ನು ತಂದು ಚಪ್ಪರ ಹಾಕಿದ್ದು ಆ ದಿನಗಳ ದೊಡ್ಡ ಸಾಹಸ. ಇದು ಮುಂದಿನ ವರುಷಗಳಲ್ಲೂ ಮುಂದುವರೆಯಿತು.

1984 ರಿಂದ ಆರನೆಯ ವರುಷದ ಶಾರದೋತ್ಸವವನ್ನು ಮಂಜುನಾಥ ಪೈ ಸಾಂಸ್ಕೃತಿಕ ಸಭಾಭವನದಲ್ಲಿ ನಡೆಸಲು ದಿ. ಬಿ. ಗಣಪತಿ ಪೈಯವರು ಅನುವು ಮಾಡಿಕೊಟ್ಟರು.ಮೂಲಾ ನಕ್ಷತ್ರದಂದು ಪ್ರತಿಷ್ಠಾಪನೆಯೊಂದಿಗೆ ವಿಜಯದಶಮಿಯಂದು ಶಾರದಾ ವಿಸರ್ಜನೆಯಯ ತನಕ ಐದು ದಿನಗಳು ವೈಭವದಿಂದ ಪೂಜಿಸಲ್ಪಡುವ ಶಾರದಾ ಮಾತೆಯ ಅನುಗ್ರಹವೆಂಬಂತೆ ವರುಷದಿಂದ ವರುಷಕ್ಕೆ ಹೆಚ್ಚಿನ ಉತ್ಸಾಹ ಉಲ್ಲಾಸ ವಿಜೃಂಭಣೆಯೊಂದಿಗೆ ಶಾರದಾ ಮಹೋತ್ಸವ ಜರುಗುತ್ತಾ ಸಾಗಿತು. ಮುಂದಿನ ವರುಷಗಳಲ್ಲಿ ದೇವಿಯ ಮೂರ್ತಿಯನ್ನು ಬಂಟ್ವಾಳದಿಂದ ಮಾಡಿಸಿ ತರಲು ಆರಂಭಿಸಿದರು. ವರುಷದಿಂದ ವರುಷಕ್ಕೆ‌ ಹೊಸತನ ಬದಲಾವಣೆ ನಡೆಯುತ್ತಿದ್ದಂತೆ ಪ್ರಸ್ತುತ ದೇವಿಯ ಸುಂದರ ಮೂರ್ತಿಯನ್ನು ಮಂಗಳೂರಿನಿಂದ ಮಾಡಿಸಿ ತಂದು ಪೂಜಿಸುತ್ತಿದ್ದಾರೆ.

ಮಕ್ಕಳಲ್ಲಿ ನಮ್ಮ ಸಂಸ್ಕೃತಿ ಸಂಸ್ಕಾರದ ಅರಿವು ಮೂಡಿಸುವ ನಿಟ್ಟಿನಲ್ಲಿ ಭಗವದ್ಗೀತೆ ಕಂಠಪಾಠ ಸ್ಪರ್ಧೆ,ಭಕ್ತಿಗೀತೆ ಸ್ಫರ್ಧೆ, ರಂಗವಲ್ಲಿ ಸ್ಫರ್ಧೆ, ಪೌರಾಣಿಕ ಪಾತ್ರಗಳ ಛದ್ಮವೇಷ ಸ್ಪರ್ಧೆ ನಡೆಸುತ್ತಾ ಮಕ್ಕಳಲ್ಲಿ ಸ್ಪರ್ಧಾ ಮನೋಭಾವದ ಜೊತೆ ಸಂಸ್ಕೃತಿಯ ಬಗ್ಗೆ ತಿಳುವಳಿಕೆ ಮೂಡಿಸಲು ಪ್ರಯತ್ನ ನಡೆದಿತ್ತು. ಈ ವರುಷ ದೇಶಭಕ್ತಿ ಗೀತೆ, ಛದ್ಮವೇಷ ಸ್ಪರ್ಧೆ ಹಾಗೂ ರಸಪ್ರಶ್ನೆ ಸ್ಪರ್ಧೆ ಮಕ್ಕಳಿಗಾಗಿ ಏರ್ಪಡಿಸಿದ್ದಾರೆ.

ಭಕ್ತಾದಿಗಳು ವಂತಿಗೆಯ ರೂಪದಲ್ಲಿ ದೇಣಿಗೆ ನೀಡುವ ಜೊತೆಗೆ ದೇವಿಗೆ ಆಭರಣಗಳನ್ನು ಸಮರ್ಪಿಸುತ್ತಾ ಈ ಮಹೋತ್ಸವದಲ್ಲಿ ಭಾಗಿಯಾಗುತ್ತಿದ್ದಾರೆ.
ಅಂದಿನ ಯುವಕರು ಇಂದು ಹಿರಿಯ‌ ನಾಗರಿಕರಾದರೆ , ಅವರಿಗೆ ಜೊತೆಯಾದ ಮುಂದಿನ ಯುವ ಪೀಳಿಗೆ ಈಗ ಅದೇ ಉತ್ಸಾಹದಿಂದ ಎಲ್ಲಾ ಕಾರ್ಯಕ್ರಮಗಳಲ್ಲೂ ಹೆಚ್ಚಿನ ಆಸಕ್ತಿ ವಹಿಸಿ ಭಾಗಿಯಾಗುತ್ತಿದ್ದಾರೆ.ಹಿರಿಯರ‌ ಮಾರ್ಗದರ್ಶನ,ಕಿರಿಯರ ಉತ್ಸಾಹ ಜೊತೆಗೂಡಿ ಕಾರ್ಕಳದ ಮಂಜುನಾಥ ಪೈ ಸಭಾಂಗಣದಲ್ಲಿ ಹಬ್ಬದ ವಾತಾವರಣ ಮೂಡಿ ಪ್ರತಿಯೊಬ್ಬರನ್ನು ಸೆಳೆಯುತ್ತಿದೆ. ಸಾಗಿ ಬಂದ ವರುಷಗಳಲ್ಲಿ ಎದುರಾದ ಅಡೆತಡೆಗಳನ್ನೆಲ್ಲಾ ದಾಟಿ ಶಾರದಾ ದೇವಿಯ ಈ ಪೂಜಾ ಮಹೋತ್ಸವವೂ ವೈಭವದಿಂದ ನಡೆಯಲು ಪ್ರತಿಯೊಬ್ಬರ ಸಹಕಾರವೂ ಅಷ್ಟೇ ಮುಖ್ಯ. ಪ್ರತಿಯೊಂದರಲ್ಲೂ ಅಚ್ಚುಕಟ್ಟುತನ ರೂಪಿಸಿಕೊಂಡು ಜೊತೆಯಾಗಿ ಸಾಗುತ್ತಿರುವ ಶಾರದಾ ಪೂಜಾ ಸಮಿತಿಯ ಸದಸ್ಯರು ಕಾರ್ಕಳದ‌ ಹೆಮ್ಮೆ. ಮುಂದಿನ ದಿನಗಳಲ್ಲೂ ಈ ವೈಭವ ಇನ್ನೂ ಅಧಿಕವಾಗಲಿ ಶಾರದಾ ಮಾತೆಯ ಕೃಪಾ ಕಟಾಕ್ಷದಿಂದ ಭಕ್ತಾದಿಗಳ‌ ಮನೋಭಿಷ್ಟ ನೆರವೇರಲಿ ಎಂಬುದು ಆ ದೇವಿಯ ಚರಣಗಳಲ್ಲಿ ಅರಿಕೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page