
ತಿರುವನಂತಪುರಂ: ಶಬರಿಮಲೆ ಶ್ರೀ ಧರ್ಮಶಾಸ್ತ ದೇವಸ್ಥಾನದಲ್ಲಿ ಪತ್ತೆಯಾಗಿದ್ದ ‘ವಾಕ್ದೋಷ’ ನಿವಾರಣೆಗೆ ತಿರುವಾಂಕೂರು ದೇವಸ್ವಂ ಮಂಡಳಿ (TDB) ವಿಶೇಷ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಮಂಡಲ-ಮಕರವಿಳಕ್ಕು ತೀರ್ಥಯಾತ್ರೆ ಆರಂಭಕ್ಕೂ ಮುನ್ನ ಕೇರಳ ಮತ್ತು ಕರ್ನಾಟಕದ 25 ಪ್ರಮುಖ ದೇವಾಲಯಗಳಲ್ಲಿ ಪರಿಹಾರ ಪೂಜೆ, ಪ್ರಾಯಶ್ಚಿತ್ತ ವಿಧಿಗಳು ಹಾಗೂ ಕಾಣಿಕೆ ಸಮರ್ಪಣೆ ನಡೆಯುತ್ತಿದೆ.
2018ರಲ್ಲಿ ಶಬರಿಮಲೆಯಲ್ಲಿ ನಡೆದ ಅಷ್ಟಮಂಗಲ ದೇವಪ್ರಶ್ನೆಯಲ್ಲಿ ‘ವಾಕ್ದೋಷ’ ಇರುವುದಾಗಿ ತಿಳಿದುಬಂದಿತ್ತು. ಭಕ್ತರು, ದೇವಸ್ಥಾನದ ಸಿಬ್ಬಂದಿ ಹಾಗೂ ಭದ್ರತಾ ಸಿಬ್ಬಂದಿ ಅಸಭ್ಯ ಅಥವಾ ಕಟುವಾಗಿ ವರ್ತಿಸಿರುವುದು ಇದಕ್ಕೆ ಕಾರಣವೆಂದು ಸೂಚಿಸಲಾಗಿತ್ತು. ದೋಷ ನಿವಾರಣೆಗಾಗಿ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಸುವಂತೆ ಸಲಹೆ ನೀಡಲಾಗಿತ್ತು.
ಕರ್ನಾಟಕದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲೂ ಪರಿಹಾರ ವಿಧಿವಿಧಾನಗಳು ನಡೆಯುತ್ತಿವೆ. ಇದರ ಅಂಗವಾಗಿ ಬೆಳ್ಳಿ ನಾಲಿಗೆ, ಬೆಳ್ಳಿಯ ಗಂಟೆ ಹಾಗೂ ಬೆಳ್ಳಿಯ ಲೇಖನಿಯನ್ನು ಸಾಂಕೇತಿಕ ಕಾಣಿಕೆಯಾಗಿ ಅರ್ಪಿಸಲಾಗಿದೆ. ಆಗಸ್ಟ್ 3ರಂದು ಶಬರಿಮಲೆಯಲ್ಲಿ ಪೂಜಿಸಲಾದ ವಿಶೇಷ ಗಂಟೆಯನ್ನು ಕೊಲ್ಲೂರಿಗೆ ತರಲಾಗಿದ್ದು, ನವರಾತ್ರಿ ಬಳಿಕ ಮಹಾಪೂಜೆ ನಡೆಸಲು ನಿರ್ಧರಿಸಲಾಗಿದೆ.
ಕಾಸರಗೋಡಿನ ಬೆಳ ಕುಮಾರಮಂಗಲ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಕಾರ್ತಿಕ ಪೂಜೆ ಹಾಗೂ ₹1,001 ಮಹಾಕಾಣಿಕೆ ಸಲ್ಲಿಸಲಾಗಿದೆ. ಕೊಲ್ಲೂರಿನ ಮಹಾಪೂಜೆ ನಡೆಯುವ ದಿನ ಇಲ್ಲಿಯೂ ‘ರಂಗಪೂಜೆ’ ನಡೆಯಲಿದೆ. ಕಣ್ಣೂರಿನ ಎಡಕ್ಕಾಡ್ ಮಹಾವಿಷ್ಣು, ತೃಶ್ಶೂರಿನ ವಡಕ್ಕುಂನಾಥನ್, ಕೂಡಲ್ಮಾಣಿಕ್ಯಂ ಹಾಗೂ ಗುರುವಾಯೂರು ಶ್ರೀಕೃಷ್ಣ ದೇವಸ್ಥಾನ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ವಿವಿಧ ಪೂಜೆ ಮತ್ತು ಕಾಣಿಕೆ ಸಮರ್ಪಣೆಗಳು ನಡೆಯುತ್ತಿವೆ.
TDB ಅಧ್ಯಕ್ಷ ಕೆ. ಜಯಕುಮಾರ್ ಮಾತನಾಡಿ, ಎಲ್ಲಾ ಪರಿಹಾರ ಪೂಜೆಗಳು ಪೂರ್ಣಗೊಂಡ ಬಳಿಕ ದೇವಸ್ವಂ ಮಂಡಳಿ ಹಾಗೂ ಶಬರಿಮಲೆ ಕ್ಷೇತ್ರದ ಇತಿಹಾಸದಲ್ಲಿ ಹೊಸ ‘ಸುವರ್ಣ ಯುಗ’ ಆರಂಭವಾಗುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.
ಆ.16ರಿಂದ ಶಬರಿಮಲೆ ಮಾಸಿಕ ಪೂಜೆ
ಮಲಯಾಳಂ ಚಿಂಗಂ ತಿಂಗಳ ಮಾಸಿಕ ಪೂಜೆಗಾಗಿ ಶಬರಿಮಲೆ ದೇವಸ್ಥಾನದ ಬಾಗಿಲು ಆಗಸ್ಟ್ 16ರಂದು ಸಂಜೆ ತೆರೆಯಲಿದೆ. ಆ.21ರವರೆಗೆ ಭಕ್ತರಿಗೆ ದರ್ಶನಕ್ಕೆ ಅವಕಾಶವಿದ್ದು, ಓಣಂ ವಿಶೇಷ ಪೂಜೆಗಾಗಿ ಆ.24ರಿಂದ 28ರವರೆಗೆ ಮತ್ತೆ ದೇವಸ್ಥಾನ ತೆರೆಯಲಿದೆ. ಭಕ್ತರು ಅಧಿಕೃತ ವೆಬ್‌ಸೈಟ್ ಮೂಲಕ ವರ್ಚುವಲ್ ಕ್ಯೂ ಕಾಯ್ದಿರಿಸಬಹುದಾಗಿದೆ.

























































