
ಕಾರ್ಕಳ: ಕರಿಯಕಲ್ಲು ಶ್ರೀ ಶನೀಶ್ವರ ಕ್ಷೇತ್ರದ ಶನೀಶ್ವರ ದೇವರಿಗೆ ಅಳವಡಿಸಲಾಗಿದ್ದ ಬೆಳ್ಳಿಯ ಕಣ್ಣುಗಳು ಕಳುವಾಗಿರುವ ಘಟನೆ ಬೆಳಕಿಗೆ ಬಂದಿದೆ.
ದಿನಾಂಕ 16-06-2026ರಂದು ಬೆಳಿಗ್ಗೆ ಸುಮಾರು 7.00 ಗಂಟೆಗೆ ಸಾರ್ವಜನಿಕ ಶನಿಪೂಜಾ ಸಮಿತಿಯ ಸದಸ್ಯರೊಬ್ಬರು ದೇವಸ್ಥಾನಕ್ಕೆ ಆಗಮಿಸಿದ ವೇಳೆ ದೇವರಿಗೆ ಅಳವಡಿಸಲಾಗಿದ್ದ ಬೆಳ್ಳಿಯ ಕಣ್ಣುಗಳು ಕಾಣೆಯಾಗಿರುವುದು ಗಮನಕ್ಕೆ ಬಂದಿದೆ. ಈ ಕುರಿತು ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಸಾರ್ವಜನಿಕ ಶನಿಪೂಜಾ ಸಮಿತಿಯವರು ಪರಿಶೀಲನೆ ನಡೆಸಿ, ಕಳವು ನಡೆದಿರುವುದನ್ನು ಖಚಿತಪಡಿಸಿಕೊಂಡಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದ್ದು, ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಕಳವು ನಡೆಸಿದವರ ಪತ್ತೆಗಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.ಈ ಘಟನೆ ಭಕ್ತರಲ್ಲಿ ಆತಂಕ ಹಾಗೂ ಬೇಸರವನ್ನುಂಟು ಮಾಡಿದ್ದು, ತಪ್ಪಿತಸ್ಥರನ್ನು ಶೀಘ್ರ ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

































