
ಬೆಂಗಳೂರು: ಇನ್ಫೋಸಿಸ್ ಮುಖ್ಯಸ್ಥರಾದ ಡಾ. ನಾರಾಯಣ ಮೂರ್ತಿ ಹಾಗೂ ಅವರ ಪತ್ನಿ ಸುಧಾಮೂರ್ತಿ ರಾಜ್ಯ ಸರ್ಕಾರದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಪಾಲ್ಗೊಳ್ಳಲು ನಿರಾಕರಿಸಿದ್ದು ವೈಯಕ್ತಿಕ ಕಾರಣಗಳಿಂದ ಸಮೀಕ್ಷೆಯಲ್ಲಿ ಭಾಗವಹಿಸುತ್ತಿಲ್ಲ ಎಂದು ಹಿಂದುಳಿದ ವರ್ಗಗಳ ಆಯೋಗಕ್ಕೆ ಪತ್ರದ ಮೂಲಕ ತಿಳಿಸಿದ್ದಾರೆ.
ಪತ್ರದಲ್ಲಿ ಉಲ್ಲೇಖವಾಗಿರುವ ಅಂಶ:
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮೂಲಕ ನಡೆಯುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ನಮ್ಮ ಕೆಲವು ವೈಯಕ್ತಿಕ ಕಾರಣಗಳಿಂದ ಮಾಹಿತಿ ನೀಡಲು ನಿರಾಕರಿಸುತ್ತೇವೆ. ನಾವು ಹಿಂದುಳಿದ ಯಾವುದೇ ಜಾತಿಗೆ ಸೇರಿಲ್ಲ. ಹೀಗಾಗಿ ಈ ಸಮೀಕ್ಷೆ ಸರಕಾರಕ್ಕೆ ಉಪಯೋಗವಿಲ್ಲ. ನಮ್ಮ ಕುಟುಂಬ ಈ ಸಮೀಕ್ಷೆಯಲ್ಲಿ ಭಾಗವಹಿಸುವುದಿಲ್ಲ. ನಾವು ನಮ್ಮ ಮಾಹಿತಿಯನ್ನು ನೀಡಲು ನಿರಾಕರಿಸುತ್ತೇವೆ ಎಂದು ಸ್ವಯಂ ದೃಢೀಕರಣ ಪತ್ರದಲ್ಲಿ ಉಲ್ಲೇಖಿಸಿದ್ದಾರೆ ಎಂದು ತಿಳಿದುಬಂದಿದೆ.
ಈ ಕುರಿತು ಪ್ರತಿಕ್ರಿಯಿಸಿದ ಡಿಸಿಎಂ ಡಿಕೆ ಶಿವಕುಮಾರ್ ‘ನಾವು ಯಾರಿಗೂ ಬಲವಂತ ಮಾಡುವುದಿಲ್ಲ. ಅವರವರ ಸ್ವಇಚ್ಛೆ’ ಎಂದು ತಿಳಿಸಿದ್ದಾರೆ.








