
ಬೆಂಗಳೂರು: ಇತ್ತೀಚಿಗಷ್ಟೇ ಕಂದಾಯ ಸಚಿವ ಕೃಷ್ಣಭೈರೇಗೌಡ ಅವರು ವಿಧಾನ ಪರಿಷತ್ತಿನಲ್ಲಿ ತಂದೆ-ತಾಯಿ ಹಾಗೂ ಹಿರಿಯ ನಾಗರಿಕರನ್ನು ಸರಿಯಾಗಿ ಆರೈಕೆ ಮಾಡದಿದ್ದರೆ ಅವರ ಆಸ್ತಿಯಲ್ಲಿ ಮಕ್ಕಳಿಗೆ ಪಾಲು ಇಲ್ಲ. ಹಿರಿಯರನ್ನು ನೋಡಿಕೊಳ್ಳದಿದ್ದರೆ ಅವರು ನೀಡಿದ ವಿಲ್-ದಾನ ಪತ್ರ ರದ್ದಾಗಲಿದೆ ಎಂದು ಹೇಳಿದ್ದರು.
ಇದರ ಬೆನ್ನಲ್ಲೇ ರಾಜ್ಯ ಸರ್ಕಾರವು ಜೀವನದ ಸಂಧ್ಯಾಕಾಲದಲ್ಲಿರುವ ಹೆತ್ತವರನ್ನು ಮಕ್ಕಳು ಆಸ್ಪತ್ರೆಯಲ್ಲಿ ಬಿಟ್ಟು ಹೋಗುತ್ತಿರುವ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಇದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ನಿರ್ಧರಿಸಿದೆ.
ನಮ್ಮ ಮಕ್ಕಳು ನಮ್ಮನ್ನು ನೋಡಿಕೊಳ್ಳಲು ಸಾಧ್ಯವಾಗದೆ ಬಿಟ್ಟು ಹೋಗಿದ್ದಾರೆ. ಕೆಲವರು ಆರ್ಥಿಕ ಸಂಕಷ್ಟಗಳಿಂದ ನಮ್ಮನ್ನು ಇಲ್ಲಿ ಬಿಟ್ಟಿದ್ದಾರೆ. ನಮ್ಮ ಆಸ್ತಿಗಳನ್ನು ತಮ್ಮ ಹೆಸರಿಗೆ ವರ್ಗಾಯಿಸಿಕೊಂಡ ನಂತರ ಚಿಕಿತ್ಸೆಯ ನೆಪದಲ್ಲಿ ನಮ್ಮನ್ನು ಸರ್ಕಾರಿ ಆಸ್ಪತ್ರೆಗೆ ಸೇರಿಸಿ ಉಚಿತವಾಗಿ ಊಟ, ವಸತಿ, ಆಶ್ರಯ ಸಿಗುತ್ತದೆ ಎಂಬ ಉದ್ದೇಶದಿಂದ ಇಲ್ಲೇ ಬಿಟ್ಟು ಹೊರಟು ಹೋಗಿದ್ದಾರೆ ಎಂದು ಹೆತ್ತವರು ಅಳಲು ತೋಡಿಕೊಂಡಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ವೈದ್ಯಕೀಯ ಶಿಕ್ಷಣ ಸಚಿವ ಡಾ| ಶರಣ ಪ್ರಕಾಶ್ ಪಾಟೀಲ್ ಪರಿತ್ಯಕ್ತ ಹಿರಿಯ ನಾಗರಿಕರಿಗೆ ಅಧಿಕಾರಿಗಳು ಬೆಳಗಾವಿ ಮತ್ತು ಸುತ್ತಮುತ್ತಲಿನ 70 ಹಿರಿಯ ನಾಗರಿಕರ ನಿವೃತ್ತಿ ಗೃಹಗಳಲ್ಲಿ ಅಥವಾ ವೃದ್ಧಾಶ್ರಮಗಳಲ್ಲಿ ಆಶ್ರಯ ಕಲ್ಪಿಸಿಕೊಟ್ಟಿದ್ದಾರೆ. ಆದರೆ ಇನ್ನೂ ಅನೇಕರು ಆಸ್ಪತ್ರೆಯಲ್ಲಿಯೇ ಇದ್ದು ಇಂತಹ ಪ್ರಕರಣಗಳು ಕಂಡು ಬಂದರೆ ಸಹಾಯಕ ಕಂದಾಯ ಆಯುಕ್ತರಿಗೆ ದೂರು ನೀಡುವಂತೆ ಸೂಚನೆ ನೀಡಿದ್ದಾರೆ.