
ಮನುಕುಲವೇ ಅಚ್ಚರಿಪಡುವಂತೆ ವಿಶ್ವದಲ್ಲೇ ಮೊದಲ ಬಾರಿಗೆ ಮಗುವಿಗೆ ಜನ್ಮ ನೀಡುವ ರೊಬೋಟ್ ಒಂದು ಆವಿಷ್ಕಾರವಾಗುತ್ತಿದೆ. ತಂತ್ರಜ್ಞಾನವನ್ನ ಬಳಸಿ ಕೃತಕ ಗರ್ಭಧಾರಣೆ ಮಾಡಿಸುವ ಮೂಲಕ ಈ ರೊಬೋಟ್ ಮಗುವಿಗೆ ಜನ್ಮ ನೀಡಲಿದೆ. ತಾಯಿಯ ಗರ್ಭದಲ್ಲಿ ಮಗು ಬೆಳೆಯುವ ರೀತಿಯಲ್ಲಿಯೇ ಈ ಕೃತಕ ಗರ್ಭಧಾರಣೆ ನಡೆಯಲಿದೆ.
ಹೌದು, ಸಿಂಗಾಪುರದ ನಾನ್ಯಾಂಗ್ ತಾಂತ್ರಿಕ ವಿಶ್ವವಿದ್ಯಾಲಯದ ವಿಜ್ಞಾನಿಯಾಗಿರುವ ಡಾಕ್ಟರ್ ಜಾಂಗ್ ಕಿಫೆಂಗ್ ನೇತೃತ್ವದಲ್ಲಿ ಗುವಾಂಗ್ ಝೌ ಮೂಲದ ಕೈವಾ ಟೆಕ್ನಾಲಜಿ ಈ ರೊಬೋಟ್ ಅನ್ನು ಅಭಿವೃದ್ಧಿಪಡಿಸುತ್ತಿದ್ದು ಮೂಲಗಳ ಪ್ರಕಾರ, ಸದ್ಯ ಈ ಸಂಶೋಧನೆ ಅಂತಿಮ ಹಂತದಲ್ಲಿದೆ ಎಂದು ತಿಳಿದು ಬಂದಿದೆ.
ಯಶಸ್ವಿಯಾದರೆ ಗರ್ಭಧಾರಣೆ ಮಾಡಬಹುದಾಗಿದ್ದು ತಾಯಿಯೊಬ್ಬಳು ಗರ್ಭ ಧರಿಸುವ ಹಾಗೆ ಈ ಪ್ರಕ್ರಿಯೆ ನಡೆಯುತ್ತದೆ. ಈ ರೊಬೋಟ್ ನ ಭ್ರೂಣದೊಳಗೆ ಅಮ್ನಿಯೋಟಿಕ್ ಎಂಬ ದ್ರವ ಇರುತ್ತದೆ. ಇದು ತಾಯಿಯ ಗರ್ಭದಲ್ಲಿರುವ ನೈಸರ್ಗಿಕ ದ್ರವದಂತೆ ವರ್ತಿಸುತ್ತದೆ.
ಮೊದಲಿಗೆ ಐವಿಎಫ್ ರೀತಿಯಲ್ಲಿ ಲ್ಯಾಬ್ ನಲ್ಲಿ ಅಂಡಾಣು ಮತ್ತು ವೀರ್ಯಾಣುಗಳ ಸಂಯೋಜನೆ ಮಾಡಿದ ನಂತರ ಈ ಸಂಯೋಜನೆಯನ್ನ ಕೃತಕ ಗರ್ಭಾಶಯಕ್ಕೆ ಸ್ಥಳಾಂತರಿಸಲಾಗುತ್ತದೆ. ಫೀಡಿಂಗ್ ಟ್ಯೂಬ್ ಮೂಲಕ ಭ್ರೂಣಕ್ಕೆ ಅಗತ್ಯವಾದ ಪೋಷಕಾಂಶ, ಆಮ್ಲಜನಕ ಮತ್ತು ಹಾರ್ಮೋನುಗಳನ್ನು ಒದಗಿಸಲಾಗುತ್ತದೆ. ಈ ಪ್ರಕ್ರಿಯೆ ಸಂಪೂರ್ಣವಾಗಿ ಎಐ ನಿಯಂತ್ರಿತ ವ್ಯವಸ್ಥೆಯಾಗಿರುತ್ತದೆ.
ಈ ರೊಬೋಟ್ ನಲ್ಲಿ ಸೆನ್ಸರ್ ಹಾಗೂ ಕ್ಯಾಮರಾಗಳು ಇದ್ದು ಇವುಗಳು ಭ್ರೂಣದ ಬೆಳವಣಿಗೆ, ತಾಪಮಾನ, ಹೃದಯಬಡಿತ ಮತ್ತು ಇತ್ಯಾದಿ ಚಟುವಟಿಕೆಗಳನ್ನು ದಿನದ 24 ಗಂಟೆಯೂ ಗಮನಿಸುತ್ತಿರುತ್ತವೆ. ಒಂದು ವೇಳೆ ಮಗುವಿನ ಬೆಳವಣಿಗೆಯಲ್ಲಿ ಏನಾದರೂ ಹೆಚ್ಚು ಕಡಿಮೆಯಾದರೆ ತಕ್ಷಣವೇ ಪತ್ತೆ ಹಚ್ಚಿ ಎಚ್ಚರಿಕೆ ನೀಡುತ್ತದೆ. ಸುಮಾರು 9 ರಿಂದ 10 ತಿಂಗಳವರೆಗೆ ಗರ್ಭದಲ್ಲಿ ಮಗು ಬೆಳೆಯುತ್ತದೆ. ಮಗು ಸಂಪೂರ್ಣವಾಗಿ ಬೆಳೆದ ಮೇಲೆ ಸರ್ಜರಿ ಮಾದರಿಯಲ್ಲಿ ಮಗುವನ್ನು ಹೊರತೆಗೆಯಲಾಗುತ್ತದೆ. ಮಗು ಜನಿಸಿದ ತಕ್ಷಣ ಮಗುವನ್ನು ನವಜಾತ ಶಿಶುಗಳ ಆರೈಕೆ ಕೇಂದ್ರಕ್ಕೆ ಕಳುಹಿಸಲಾಗುತ್ತದೆ.
ಈ ಆವಿಷ್ಕಾರ ಯಶಸ್ವಿಯಾದರೆ ತಾಯಿಯೊಬ್ಬಳು ಯಾವುದೇ ನೋವಿಲ್ಲದೆ, ಸರ್ಜರಿ ಇಲ್ಲದೆ ಮಗುವನ್ನು ಪಡೆಯಬಹುದಾಗಿದೆ.