
ವಿಶಾಖಪಟ್ಟಣಂ: ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ನೌಕಾಪಡೆಯ ಸಿಬ್ಭಂದಿಯೋಬ್ಬ ತನ್ನ ಪ್ರಿಯತಮೆಯನ್ನು ಕೊಲೆ ಮಾಡಿ, ಶವವನ್ನು ತುಂಡುಗಳಾಗಿ ಕತ್ತರಿಸಿ ಫ್ರಿಡ್ಜ್ನಲ್ಲಿ ಇಟ್ಟಿರುವ ಭೀಕರ ಘಟನೆ ಬೆಳಕಿಗೆ ಬಂದಿದೆ. ಈ ಪ್ರಕರಣ ದೆಹಲಿಯ ಶ್ರದ್ಧಾ ವಾಕರ್ ಹತ್ಯೆಯನ್ನು ನೆನಪಿಸುತ್ತದೆ.
ಮೋನಿಕಾ (29) ಹತ್ಯೆಯಾದ ಯುವತಿ ಆಗಿದ್ದು, ನೌಕಾಪಡೆ ಸಿಬ್ಭಂದಿ ಚಿಂತಾದ ರವೀಂದ್ರ (35) ಮೇಲೆ ಆರೋಪವಾಗಿದೆ. 2021ರಲ್ಲಿ ಡೇಟಿಂಗ್ ಆಪ್ ಮೂಲಕ ಪರಿಚಯವಾದ ಇವರಿಬ್ಬರ ನಡುವೆ ಪ್ರೇಮ ಸಂಬಂಧ ಬೆಳೆದಿತ್ತು.
ಭಾನುವಾರ (ಮಾ.29) ಸಂಜೆ ಇಬ್ಬರ ನಡುವೆ ನಡೆದ ಹಣಕಾಸಿನ ವಿಚಾರವಾಗಿ ಜಗಳ ನಡೆದಿದೆ. ಆರೋಪಿ ರವೀಂದ್ರ, ಹೇಳುವಂತೆ, ಮೋನಿಕಾ 3.5 ಲಕ್ಷ ರೂಪಾಯಿ ಹಣ ಪಡೆದುಕೊಂಡಳು. ಅಷ್ಟೇ ಅಲ್ಲದೆ, ಹಣ ನೀಡದಿದ್ದರೆ ಅಕ್ರಮ ಸಂಬಂಧ ಬಗೆ ಪತ್ನಿಗೆ ತಿಳಿಸುವುದಾಗಿ ಪದೇ ಪದೇ ಬೆದರಿಕೆ ಹಾಕುತ್ತಿದ್ದಳು. ಇದರಿಂದ ಆಕ್ರೋಶಗೊಂಡ ರವೀಂದ್ರ, ಮೋನಿಕಾಳನ್ನು ಚಾಕುವಿನಿಂದ ಇರಿದು ಕೊಂದಿದ್ದಾನೆ ಎಂದು ಹೇಳಲಾಗಿದೆ.
ನಂತರ ಸಾಕ್ಷ್ಯ ನಾಶಪಡಿಸಲು ಶವವನ್ನು ತುಂಡುಗಳಾಗಿ ಕತ್ತರಿಸಿ, ಕೆಲವು ಭಾಗಗಳನ್ನು ಹೊರಗೆ ಎಸೆದು, ಇನ್ನೂ ಕೆಲವು ಫ್ರಿಡ್ಜ್ನಲ್ಲಿ ಇಟ್ಟಿದ್ದಾನೆ. ದುರ್ವಾಸನೆ ಬಂದ ಹಿನ್ನೆಲೆಯಲ್ಲಿ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಮನೆ ತಪಾಸಣೆಯಲ್ಲಿ ದೇಹದ ಭಾಗಗಳು ಪತ್ತೆಯಾಗಿವೆ. ಆರೋಪಿಯನ್ನು ಬಂಧಿಸಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.






















































