
ಬೆಂಗಳೂರು: ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಗ್ಯಾರಂಟಿ ಯೋಜನೆ ಹಣ ವಿಳಂಬ ಆಗುತ್ತಿರುವುದಕ್ಕೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿವಕುಮಾರ್ ವಿರುದ್ಧ ತಮ್ಮ ಎಕ್ಸ್ ಖಾತೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವು ಗೃಹಲಕ್ಷ್ಮಿ ಮತ್ತು ಯುವ ನಿಧಿ ಸೇರಿದಂತೆ 5 ಗ್ಯಾರಂಟಿ ಯೋಜನೆಗಳ ಭರವಸೆಯೊಂದಿಗೆ ಅಧಿಕಾರಕ್ಕೆ ಏರಿತ್ತು. ಪ್ರತೀ ತಿಂಗಳು ಹಣವನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ಜಮಾ ಮಾಡುವುದಾಗಿ ಹೇಳಿತ್ತು. ಮುಖ್ಯಮಂತ್ರಿಗಳು ಹಾಗೂ ಹಣಕಾಸು ಸಚಿವರು ಆಗಿರುವ ಸಿದ್ದರಾಮಯ್ಯನವರು 4 ಲಕ್ಷ ಕೋಟಿ ರೂ. ಗಾತ್ರದ ಬಜೆಟ್ ರೂಪಿಸುವಲ್ಲಿ ನಿರತರಾಗಿದ್ದಾರೆ. ಆದರೆ ವಿಪರ್ಯಾಸವೆಂದರೆ, ಗ್ಯಾರಂಟಿ ಯೋಜನೆಗಳ ಫಲಾನುಭವಿಗಳು ಹಣಕ್ಕಾಗಿ 3-4 ತಿಂಗಳು ಕಾಯಬೇಕಾಗಿದೆ. ವಿಳಂಬ ಸಾಕು, ಕಾರಣ ಬೇಡ, ಕಟಾಕಟ್ ಹಣ ವರ್ಗಾಯಿಸಿ ಎಂದು ಆಗ್ರಹಿಸಿದ್ದಾರೆ.









