ಯುಗಾದಿ ದಿನ ಏಕೆ…? ರಂಜಾನ್ ದಿನ ಸಭೆ ಕರಿಯಬಹುದಿತ್ತಲ್ಲವೇ: ಬಿಜೆಪಿ ಶಾಸಕ ವ್ಯಂಗ್ಯ

ಬೆಂಗಳೂರು: ವಿಧಾನಸಭೆ ಅಧಿವೇಶನದ ಪ್ರಶ್ನೆಗಳು ಬಾಕಿ ಇರುವ ಹಿನ್ನೆಲೆಯಲ್ಲಿ ಮಾರ್ಚ್ 23ಕ್ಕೆ ಸಂಬಂಧಿಸಿದ ಕಾರ್ಯಗಳಿಗೆ ಸಿದ್ಧತೆಗಾಗಿ ಕಂದಾಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಯುಗಾದಿ ಹಬ್ಬದ ರಜೆ ರದ್ದುಪಡಿಸಲಾಗಿದೆ. ಅಪರ ಮುಖ್ಯ ಕಾರ್ಯದರ್ಶಿಗಳ ಸೂಚನೆಯಂತೆ ಮಾರ್ಚ್ 19ರಂದು ಕಚೇರಿಗೆ ಕಡ್ಡಾಯವಾಗಿ ಹಾಜರಾಗುವಂತೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ ತಿಳಿಸಿದ್ದಾರೆ.
ಮುಜರಾಯಿ, ಭೂ ಮಂಜೂರಾತಿ, ಭೂ ಕಂದಾಯ, ಭೂ ಮಾಪನ ಸೇರಿದಂತೆ ಒಟ್ಟು 9 ಶಾಖೆಗಳ ಸಿಬ್ಬಂದಿಗೆ ಬಾಕಿ ಇರುವ ವಿಧಾನಸಭೆ ಪ್ರಶ್ನೆಗಳಿಗೆ ಉತ್ತರ ಸಿದ್ಧಪಡಿಸುವಂತೆ ಸೂಚನೆ ನೀಡಲಾಗಿದೆ. ಇತ್ತೀಚೆಗೆ ಉತ್ತರ ವಿಳಂಬವಾಗಿದ್ದಕ್ಕೆ ಸ್ಪೀಕರ್ ಅಸಮಾಧಾನ ವ್ಯಕ್ತಪಡಿಸಿದ್ದ ಹಿನ್ನೆಲೆ ಸರ್ಕಾರ ತುರ್ತು ಕ್ರಮ ಕೈಗೊಂಡಿದೆ.
ಇದಕ್ಕೆ ಪ್ರತಿಕ್ರಿಯಿಸಿದ ಮಾಜಿ ಸಚಿವ ಸುರೇಶ್ ಕುಮಾರ್, ಯುಗಾದಿ ಹಬ್ಬದ ದಿನವೇ ಅಧಿಕಾರಿಗಳನ್ನು ಕರೆಯುವುದು ಸರಿಯೇ ಎಂಬ ಪ್ರಶ್ನೆ ಎತ್ತಿ, ಇದು ಯಾವ ಮನಸ್ಥಿತಿಯನ್ನು ತೋರಿಸುತ್ತದೆ. ನಾಡಿದ್ದು ಶುಕ್ರವಾರ ಅಥವಾ ಶನಿವಾರ ಸಭೆ ಕರೆಯಬಹುದಿತ್ತಲ್ಲವೇ..? ಸರ್ಕಾರದ ನಡೆಗೆ ವ್ಯಂಗ್ಯ ವ್ಯಕ್ತಪಡಿಸಿದ್ದಾರೆ.
















































