
ಮಂಗಳೂರು: ಮಂಗಳೂರಿನ ಕೂಳೂರು ಮಾರ್ಗ 13ಎಫ್ನಲ್ಲಿ ಎಂದಿನಂತೆ ಕೃಷ್ಣ ಪ್ರಸಾದ್ ಬಸ್ ಪ್ರಯಾಣಿಕರೊಂದಿಗೆ ತೆರಳುತ್ತಿದ್ದಾಗ ಕಾಲೇಜು ವಿದ್ಯಾರ್ಥಿಯೊಬ್ಬರಲ್ಲಿ ಹೃದಯಾಘಾತವಾಗಿದ್ದು, ಬಸ್ ಚಾಲಕ ಹಾಗೂ ನಿರ್ವಾಹಕ ಸಮಯ ಪ್ರಜ್ಞೆ ಮೆರೆದು ಜೀವ ರಕ್ಷಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.
ವಿದ್ಯಾರ್ಥಿಗೆ ಹೃದಯಾಘಾತದ ಲಕ್ಷಣಗಳು ಕಂಡು ಬಂದ ತಕ್ಷಣವೇ ಬಸ್ ಚಾಲಕ ಗಜೇಂದ್ರ ಕುಂದರ್ ಮತ್ತು ಕಂಡಕ್ಟರ್ ಮಹೇಶ್ ಪೂಜಾರಿ ಬಸ್ನಲ್ಲಿದ್ದ ಎಮರ್ಜೆನ್ಸಿ ಸೈರನ್ ಚಾಲೂ ಮಾಡಿ ಬಸ್ಸನ್ನು ತುರ್ತು ವಾಹನವನ್ನಾಗಿ ಪರಿವರ್ತಿಸಿದರು. ಅವರು ಕೇವಲ 6 ನಿಮಿಷಗಳಲ್ಲಿ 6 ಕಿಲೋಮೀಟರ್ ದೂರ ಕ್ರಮಿಸಿ ಕಂಕನಾಡಿಯ ಫಾದರ್ ಮುಲ್ಲರ್ ಆಸ್ಪತ್ರೆಗೆ ತಲುಪಿಸಿದ್ದು ಪರಿಣಾಮವಾಗಿ ವಿದ್ಯಾರ್ಥಿಯ ಜೀವ ಉಳಿಯಿತು. ಚಾಲಕ ಮತ್ತು ನಿರ್ವಾಹಕನ ಸಮಯ ಪ್ರಜ್ಞೆಗೆ ಮತ್ತು ಮಾನವೀಯತೆಗೆ ಇದೀಗ ಎಲ್ಲೆಡೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.











