ಚಿಂತಕರು, ಸಮಾಜ ಸೇವಕರು, ರಾಜಕೀಯ ಮುಖಂಡರು, ವಿದ್ಯಾರ್ಥಿಗಳು ಭಾಗಿ

ಕಾರ್ಕಳ. ಅ. 26: ಅಂಧಾಕಾರದಿಂದ ಬೆಳಕಿನೆಡಗೆ ಸಾಗುವ ರೂಪಕವಾದ ದೀಪಾವಳಿ ಹಬ್ಬವು ತಲೆತಲಾಂತರಗಳಿಂದ ಆಚರಿಸಿಕೊಂಡು ಬರುತ್ತಿದ್ದು ದೀಪಾವಳಿ ಹಬ್ಬದಲ್ಲಿ ಸಾಮಾಜಿಕ ನ್ಯಾಯದ ಸಂದೇಶವಿದೆ, ಸೌಹಾರ್ದತೆಯ ಸುಗಂಧವಿದೆ, ಶಾಂತಿ ಸಮರಸತೆಯ ದ್ಯೋತಕವೇ ದೀಪಾವಳಿ ಎಂದು ಎಂದು ಹಿರಿಯ ಪತ್ರಕರ್ತ ಮತ್ತು ಚಿಂತಕ ಬಿಪಿನ್ ಚಂದ್ರಪಾಲ್ ತಿಳಿಸಿದರು. ಅವರು ಕಾರ್ಕಳ ಕಾಂಗ್ರೆಸ್ ಕಚೇರಿಯ ಆವರಣದಲ್ಲಿ ವಿದ್ಯಾರ್ಥಿ ಬಂಧುತ್ವ ವೇದಿಕೆಯ ಆಶ್ರಯದಲ್ಲಿ ನಡೆದ ಸೌಹಾರ್ದ ದೀಪಾವಳಿ ಕಾರ್ಯಕ್ರಮ ದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು.
ಸಭೆಯಲ್ಲಿ ಮಾತನಾಡಿದ ಇನ್ನೋರ್ವ ಅತಿಥಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕ ಜಾರ್ಜ್ ಕ್ಯಾಸ್ಟಲಿನೊ, ನಾವು ಸೌಹಾರ್ಧತೆ ಎಂದರೇನು ಎಂದು ತಿಳಿಯುವ ಮುನ್ನವೇ ಪೂರ್ಣ ಸೌಹಾರ್ದತೆಯಿಂದ ಬದುಕಿದ್ದೇವೆ. ಜಾತಿ ದರ್ಮಗಳು ಗಣನೆಗೆ ಬಾರದೇ ಪ್ರೀತಿ ವಿಶ್ವಾಸ ಮಾನವೀಯತೆಗಳೆ ನಮ್ಮ ಬದುಕಿನ ಮೌಲ್ಯಗಳಾಗಿದ್ದವು ಎಂದರು.
ಮಾಜಿ ಪುರಸಭಾ ಸದಸ್ಯ ಅಶ್ಪಾಕ್ ಅಹಮದ್ ಮಾತನಾಡಿ ಹಿಂದೆ ನಾವು ಹಿಂದು ಮುಸ್ಲಿಮ್ ಕ್ರೈಸ್ತ ಎನ್ನುವ ಭೇದವಿಲ್ಲದೆ ಹಬ್ಬಗಳನ್ನು ಪರಸ್ಪರ ಸಂಭ್ರಮದಿಂದ ಅಚರಿಸಿಕೊಳ್ಳುತ್ತಿದ್ದೆವು, ಆದರೆ ಇಂದು ಕೋಮುವಾದಿ ಶಕ್ತಿಗಳ ಬೆಳವಣಿಗೆಯಿಂದ ಜಿಲ್ಲೆಯ ಸಾಮರಸ್ಯ ಕಾಣಿಯಾಗಿದೆ ಎಂದರು.
ಕಾರ್ಕಳದ ಹಿರಿಯ ವಕೀಲರಾದ ಶೇಖರ ಮಡಿವಾಳ ಮಾತನಾಡಿ, ಸಂವಿಧಾನ ಎಲ್ಲ ದರ್ಮ ಎಲ್ಲ ಜಾತಿಯವರಿಗೆ ಸಮಾನ ಅವಕಾಶಗಳನ್ನು ನೀಡಿದೆ. ಆದರೆ ಸಮಾನತೆ ಬಯಸದ ಶಕ್ತಿಗಳು ಕುತಂತ್ರದಿಂದ ಸಂವಿದಾನವನ್ನು ಬದಲಿಸಿ ಮನುವಾದವನ್ನು ತರಲು ಕುತಂತ್ರ ನಡೆಸಿವೆ, ಪ್ರಜಾಪ್ರಭುತ್ವ ವಿರೋದಿ ಶಕ್ತಿಗಳ ಕುರಿತು ಜನಜಾಗೃತಿ ನಡೆಸದಿದ್ದಲ್ಲಿ ದೇಶಕ್ಕೆ ಅಪಾಯವಿದೆ ಎಂದರು. ಮಾನವ ಬಂಧುತ್ವ ವೇದಿಕೆ ರಾಜ್ಯ ಸಮಿತಿ ಸದಸ್ಯ ರೋನಾಲ್ಢ್ ಮನೊಹರ್ ಮಾತನಾಡಿ, ಭೂಮಿ ಮೊದಲು, ದೇಶ ಎರಡನೆಯದು. ದರ್ಮಗಳನ್ನು ಮನುಷ್ಯರೇ ರಚಿಸಿಕೊಂಡಿರುವುದರಿಂದ ಪರಸ್ಪರ ಕಚ್ಚಾಡುವುದು ಅವಿವೆಕತನ ಎಂದರು.
ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕಾರ್ಕಳ ಕಾಂಗ್ರಸ್ ಮುಖಂಡರಾದ ಉದಯ ಶೆಟ್ಟಿ ಮುನಿಯಾಲು, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ದೊರಕಿಸಲು ಡಾ. ಬಿ.ಆರ್. ಅಂಬೇಡ್ಕರ್ ತಮ್ಮ ಜೀವನವನ್ನು ಮುಡಿಪಾಗಿಟ್ಟರು ಎಂದರು.
ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದ್ ರಾವ್, ಕಾಂಗ್ರೆಸ್ ಜಿಲ್ಲಾ ಸಮಿತಿಯ ಪ್ರಮುಖರಾದ ಸುದಾಕರ ಕೋಟ್ಯಾನ್ ಉಪಸ್ಥಿತರಿದ್ದರು.
ಮಾನವ ಬಂಧುತ್ವ ವೇದಿಕೆ ಕಾರ್ಕಳ ಘಟಕದ ಸಂಚಾಲಕರಾದ ಸುಭಿತ್.ಎನ್.ಆರ್ ಅವರು ಸರ್ವರನ್ನು ಸ್ವಾಗತಿಸಿದರು, ಕರಾವಳಿ ವಿಭಾಗದ ಸಂಚಾಲಕ ಕೆ.ಎಸ್. ಸತೀಶ್ ಕುಮಾರ್ ಪ್ರಾಸ್ತಾವಿಕ ನುಡಿಗಳನ್ನು ಅಡಿದರು. ಪುರಸಭಾ ಸದಸ್ಯೆ ಶ್ರೀಮತಿ ನಳಿನಿ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಬೆಳ್ಮಣ್ ನಾಗೇಶ್ ಆಚಾರ್ಯ ಸಂವಿಧಾನ ಪೀಠಿಕೆ ಭೋದಿಸಿದರು, ವಿದ್ಯಾರ್ಥಿ ಬಂಧುತ್ವ ವೇದಿಕೆಯ ತಾಲೂಕು ಪ್ರಮುಖ ನಿಶಾಂತ್ ಶೆಟ್ಟಿಗಾರ್ ವಂದನಾರ್ಪಣೆಗೈದರು. ಕಾರ್ಯಕ್ರಮದ ಬಳಿಕ ತುಳುನಾಡಿನ ಶೈಲಿಯ ದೀಪಾವಳಿ ಹಬ್ಬದ ವಿಶೇಷ ತಿಂಡಿ ತಿನಿಸುಗಳ ಉಪಹಾರ ಕೂಟವನ್ನು ನಡೆಸಲಾಯಿತು.



















































