
ನವದೆಹಲಿ: ದೆಹಲಿಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯೊಂದರಲ್ಲಿ ವಿದ್ಯಾರ್ಥಿಗಳ ಬೆನ್ನು ಬಿದ್ದಿದ್ದ ಸ್ವಾಮಿ ಚೈತನ್ಯಾನಂದ ಸರಸ್ವತಿಯ ಒಂದೊಂದೆ ಕರ್ಮಕಾಂಡ ಬಯಲಾಗಿದ್ದು ‘ನೀನು ಸುಂದರವಾಗಿ ಕಾಣ್ತೀಯಾ.. ಬೇಬಿ ಐ ಲವ್ಯೂ’ ಅಂತ ಕಾಲೇಜು ವಿದ್ಯಾರ್ಥಿನಿಯರಿಗೆ ಮೆಸೇಜ್ ಮಾಡುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ.
ದೆಹಲಿಯ ವಸಂತ್ ಕುಂಜ್ ಪೊಲೀಸ್ ಠಾಣೆಯಲ್ಲಿ ಸ್ವಾಮೀಜಿ ವಿರುದ್ಧ ಲೈಂಗಿಕ ಕಿರುಕುಳ ಆರೋಪದ ಮೇಲೆ ಎಫ್ಐಆರ್ ದಾಖಲಾಗಿದೆ. ಎಫ್ಐಆರ್ ನಲ್ಲಿ ಕಿರುಕುಳ ನೀಡಿರುವ ಬಗ್ಗೆ ಯುವತಿಯರ ಹೇಳಿಕೆ ಉಲ್ಲೇಖವಾಗಿದ್ದು EWS ಕೋಟಾದಡಿ ಬಂದ ವಿದ್ಯಾರ್ಥಿನಿಯರನ್ನು ಸ್ವಾಮೀಜಿ ಟಾರ್ಗೆಟ್ ಮಾಡುತ್ತಿದ್ದರು. ಸ್ಕಾಲರ್ಶಿಪ್ ಕೊಡಿಸುವ, ಅಂಕಗಳನ್ನು ಕಟ್ ಮಾಡುವ, ಮಾರ್ಕ್ಸ್ ಕಾರ್ಡ್ ಕೊಡುವುದಿಲ್ಲ ಎಂದು ಬೆದರಿಕೆ ಹಾಕುತ್ತಿದ್ದರು ಎನ್ನಲಾಗಿದೆ. ಇದಲ್ಲದೆ ವಿದೇಶ ಪ್ರವಾಸದ ಆಫರ್ ನೀಡಿ ಲೈಂಗಿಕ ಕಿರುಕುಳ ನೀಡುತ್ತಿದ್ದರು. ತಡರಾತ್ರಿ ಮೆಸೇಜ್ ಮಾಡಿ ಪ್ರತಿಕ್ರಿಯೆ ನೀಡುವಂತೆ ಒತ್ತಾಯಿಸುತ್ತಿದ್ದರು. ಕಾಲೇಜಿನ ಡೀನ್ಗೆ ದೂರು ನೀಡಲು ಬಂದರೆ, ಮೆಸೇಜ್ಗೆ ಪ್ರತಿಕ್ರಿಯೆ ನೀಡುವಂತೆ ಸಲಹೆ ನೀಡುತ್ತಿದ್ದರೆಂದು ವಿದ್ಯಾರ್ಥಿನಿಯರು ಆರೋಪ ಮಾಡಿದ್ದಾರೆ.






















































