ಗಜಾನನ ಕ್ರಿಕೆಟರ್ಸ್ ಚಲನಚಿತ್ರ ತಂಡದವರ ವಿಶೇಷ ಉಪಸ್ಥಿತಿ…

ಕಾರ್ಕಳ, ಜೂನ್ 16: ಕಾರ್ಕಳದ ವರ್ಧಮಾನ ಶಿಕ್ಷಣ ಸಂಸ್ಥೆಯಲ್ಲಿ 2026-27ನೇ ಶೈಕ್ಷಣಿಕ ಸಾಲಿನ ಪಠ್ಯೇತರ ಚಟುವಟಿಕೆಗಳ ಉದ್ಘಾಟನಾ ಸಮಾರಂಭವು ಅದ್ದೂರಿಯಾಗಿ ನೆರವೇರಿತು.
ಕಾರ್ಯಕ್ರಮವನ್ನು ಯಕ್ಷಗಾನ ಗುರು ಮಹಾವೀರ ಪಾಂಡಿ ಉದ್ಘಾಟಿಸಿ ಮಾತನಾಡಿ, ಪ್ರಾಥಮಿಕ ಹಂತದಲ್ಲಿಯೇ ಮಕ್ಕಳಲ್ಲಿರುವ ಪ್ರತಿಭೆಗಳನ್ನು ಗುರುತಿಸಿ ಅವುಗಳಿಗೆ ಸೂಕ್ತ ವೇದಿಕೆ ಮತ್ತು ಅವಕಾಶ ಕಲ್ಪಿಸುವ ಕಾರ್ಯವನ್ನು ವರ್ಧಮಾನ ಶಿಕ್ಷಣ ಸಂಸ್ಥೆ ಮಾಡುತ್ತಿರುವುದು ಶ್ಲಾಘನೀಯ. ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ವಿವಿಧ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಸಮಾಜದಲ್ಲಿ ಉತ್ತಮ ಆದರ್ಶ ವ್ಯಕ್ತಿಗಳಾಗಿ ಬೆಳೆಯಬೇಕು ಎಂದು ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ‘ಗಜಾನನ ಕ್ರಿಕೆಟರ್ಸ್’ ಚಲನಚಿತ್ರದ ಅತ್ಯುತ್ತಮ ಪೋಷಕ ನಟಿ ಹಾಗೂ ನಾಮನಿರ್ದೇಶಿತ ಕಲಾವಿದೆ ರೂಪಶ್ರೀ ವರ್ಕಾಡಿ, ನಟ ಕರಣ್ ಪೂಜಾರಿ ಹಾಗೂ ಸಹ ನಿರ್ದೇಶಕ ಪ್ರತೀಕ್ ಪಿ. ಬಂಡಿ ಮಾತನಾಡಿ, ಶಿಕ್ಷಣದೊಂದಿಗೆ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪಠ್ಯೇತರ ಚಟುವಟಿಕೆಗಳಿಗೆ ಆದ್ಯತೆ ನೀಡುತ್ತಿರುವ ವರ್ಧಮಾನ ಶಿಕ್ಷಣ ಸಂಸ್ಥೆಯ ಕಾರ್ಯವೈಖರಿ ಅಭಿನಂದನೀಯವಾಗಿದೆ. ವಿದ್ಯಾರ್ಥಿಗಳು ಇಂತಹ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಪಠ್ಯೇತರ ಚಟುವಟಿಕೆಗಳ ತರಬೇತುದಾರರಾದ ಮಹಾವೀರ ಪಾಂಡಿ (ಯಕ್ಷಗಾನ), ಕರ್ತವ್ಯ ಜೈನ್ (ಝುಂಬಾ), ರಾಮಚಂದ್ರ ಎಚ್. (ಕರಾಟೆ), ಸುನಿತಾ (ಅಬಾಕಸ್), ಗೀತಾ ಕಾಮತ್ (ಕ್ರಾಫ್ಟ್), ಶ್ರದ್ಧಾ ಸಂದೀಪ್ (ಚೆಂಡೆ), ಮಮತಾ ದೇವಾಡಿಗ (ಯೋಗ), ಕೃತಿಕಾ (ಕ್ರೋಶೆಟ್), ಶ್ರಾವ್ಯ (ನೃತ್ಯ), ಸಂದೀಪ್ (ಕ್ರೀಡೆ), ಕರ್ತವ್ಯ ಜೈನ್ ಹಾಗೂ ಮಮತಾ ದೇವಾಡಿಗ (ಸ್ಕೌಟ್ಸ್), ಪ್ರಿಯಾ (ಗೈಡ್ಸ್), ಸ್ವಾತಿ (ಕಬ್ ಮಾಸ್ಟರ್), ಸೌಮ್ಯ ಆಚಾರ್ಯ (ಫ್ಲಾಕ್ ಲೀಡರ್) ಹಾಗೂ ಸ್ಮಿತಾ (ಬನ್ನೀಸ್) ಅವರನ್ನು ಕುಮಾರಯ್ಯ ಹೆಗ್ಡೆ ಗೌರವಿಸಿದರು.
ಸಂಸ್ಥೆಯ ಅಧ್ಯಕ್ಷೆ ಶಶಿಕಲಾ ಕೆ. ಹೆಗ್ಡೆ ಪ್ರಾಸ್ತಾವಿಕವಾಗಿ ಮಾತನಾಡಿ, ಅತಿಥಿಗಳು ಹಾಗೂ ಸಭಿಕರನ್ನು ಸ್ವಾಗತಿಸಿದರು. ಸೌಮ್ಯ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರೆ, ಪ್ರಿಯಾ ವಂದನಾರ್ಪಣೆಗೈದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕ ವೃಂದ ಹಾಗೂ ಗಣ್ಯರು ಉಪಸ್ಥಿತರಿದ್ದರು.
ಪಠ್ಯೇತರ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳ ಪ್ರತಿಭೆ ಅನಾವರಣಗೊಳ್ಳಲು ಈ ಕಾರ್ಯಕ್ರಮವು ಹೊಸ ಚೈತನ್ಯವನ್ನು ಮೂಡಿಸಿತು.


































