
ಕೋಝಿಕ್ಕೋಡ್: ಶಿಮ್ ಜಿತಾ ಮುಸ್ತಫ (35) ಎಂಬ ಮಹಿಳೆಯು 42 ವರ್ಷದ ವ್ಯಕ್ತಿಯ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡುತ್ತಾ ಚಿತ್ರೀಕರಿಸಿದ ವೀಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿದ್ದು ಇದೀಗ ಆಕೆಯ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಗೋವಿಂದಪುರ ನಿವಾಸಿ ದೀಪಕ್ ಎಂಬವರು ವೈರಲ್ ಆಗಿದ್ದ ವೀಡಿಯೋದಲ್ಲಿ ಕಾಣಿಸಿಕೊಂಡಿದ್ದು ರವಿವಾರ ತಮ್ಮ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದೀಪಕ್ ಅವರ ತಾಯಿ ನೀಡಿದ ದೂರಿನ ಮೇರೆಗೆ, ಸೋಮವಾರ ಮಹಿಳೆಯ ವಿರುದ್ಧ ಜಾಮೀನುರಹಿತ ಕಲಂನಡಿ ಎಫ್ಐಆರ್ ದಾಖಲಾಗಿದೆ.
ಸಾಮಾಜಿಕ ಮಾಧ್ಯಮಗಳಲ್ಲಿ ಲೈಂಗಿಕ ಕಿರುಕುಳದ ವೀಡಿಯೋ ವ್ಯಾಪಕವಾಗಿ ಹರಡಿದ ನಂತರ ದೀಪಕ್ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದು ನಿರಂತರ ಟೀಕೆ ಹಾಗೂ ಆಕ್ರೋಶವನ್ನು ಎದುರಿಸಬೇಕಾಯಿತು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ದೀಪಕ್ ಶುಕ್ರವಾರ ಕೆಲಸದ ನಿಮಿತ್ತ ಬಸ್ಸಿನಲ್ಲಿ ಕಣ್ಣೂರಿಗೆ ಪ್ರಯಾಣಿಸುತ್ತಿದ್ದ ವೇಳೆ, ಅದೇ ಬಸ್ಸಿನಲ್ಲಿ ಪ್ರಯಾಣಿಸಿದ್ದ ಶಿಮ್ ಜಿತಾ ಎಂಬ ಮಹಿಳೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಿದ್ಧಿ ಪಡೆಯುವ ಉದ್ದೇಶದಿಂದ ಅವರ ಚಾರಿತ್ರ್ಯ ಹನನ ಮಾಡಿದ್ದಾಳೆ ಎಂದು ಸಂಬಂಧಿಕರು ಆರೋಪ ಮಾಡಿದ್ದು ಈ ಪ್ರಕರಣದ ಗಂಭೀರತೆಯನ್ನು ಪರಿಗಣಿಸಿದ ಕೇರಳ ರಾಜ್ಯ ಮಾನವ ಹಕ್ಕುಗಳ ಆಯೋಗ, ಘಟನೆಯ ಕುರಿತು ಸಮಗ್ರ ತನಿಖೆ ನಡೆಸುವಂತೆ ಪೊಲೀಸರಿಗೆ ಆದೇಶಿಸಿದ್ದು, ಒಂದು ವಾರದೊಳಗೆ ವರದಿ ಸಲ್ಲಿಸಲು ಉತ್ತರ ವಲಯ ಡಿಜಿಪಿಗೆ ನಿರ್ದೇಶನ ನೀಡಿದೆ.








