
ರಾಜ್ಯ ಸರ್ಕಾರವು ಇದೀಗ ರೋಗಿಗಳ ಮನೆ ಬಾಗಿಲಿಗೇ ಔಷಧ ಪೂರೈಕೆ ಮಾಡಲು ನಿರ್ಧರಿಸಿದ್ದು ಹೀಗಾಗಿ ರಕ್ತದೊತ್ತಡ ಹಾಗು ಮಧುಮೇಹ ರೋಗಿಗಳ ಮನೆಗಳಿಗೆ ತೆರಳಿ ಔಷಧ ವಿತರಿಸುವ ʻಗೃಹ ಆರೋಗ್ಯʼ ಯೋಜನೆಯನ್ನು ಶೀಘ್ರದಲ್ಲೇ ಜಾರಿಗೊಳಿಸಲು ಮುಂದಾಗಿದೆ.
ಈಗಾಗಲೇ ಸಕಲ ತಯಾರಿ ನಡೆಸುತ್ತಿದ್ದು ಅದಕ್ಕಾಗಿ ಆಯಾ ಜಿಲ್ಲೆಗಳಲ್ಲಿ ಆರೋಗ್ಯಾಧಿಕಾರಿಗಳು ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರ ಮೂಲಕ ಜಿಲ್ಲೆಯಲ್ಲಿ ಯಾವ ಮನೆಯಲ್ಲಿ ಎಷ್ಟು ಮಂದಿ ರಕ್ತದೊತ್ತಡ ಮತ್ತು ಮಧುಮೇಹ ಸಮಸ್ಯೆಗಳಿಗೆ ಗುರಿಯಾಗಿದ್ದಾರೆ ಎಂಬೆಲ್ಲ ಅಂಕಿ ಅಂಶವನ್ನು ಕಲೆಹಾಕುತ್ತಿದ್ದಾರೆ. ಕುಟುಂಬ ಕಲ್ಯಾಣ ಇಲಾಖೆಯು ಎಷ್ಟು ಪ್ರಮಾಣದಲ್ಲಿ ಮಾತ್ರೆಗಳನ್ನು ವಿತರಣೆ ಮಾಡಬೇಕು ಎಂಬ ಅಂಕಿ ಅಂಶವನ್ನು ಸಹ ಸಂಗ್ರಹಿಸಿದ್ದು ಇದರ ಆಧಾರದ ಮೇಲೆ ಇನ್ಮುಂದೆ ಮನೆ ಬಾಗಿಲಿಗೇ ಔಷಧ ಪೂರೈಕೆ ಆಗಲಿದೆ.
ಸದ್ಯ ರೋಗಿಗಳಿಗೆ ಔಷಧವನ್ನು ಪ್ರತಿ ಮಂಗಳವಾರ ಮತ್ತು ಶುಕ್ರವಾರ ನೀಡಲಾಗುವುದು. 5 ಸಾವಿರ ರೋಗಿಗಳಿಗೆ ಒಬ್ಬರು ಸ್ವಾಫ್ ನರ್ಸ್, 1 ಸಾವಿರ ರೋಗಿಗಳಿಗೆ ಒಬ್ಬರು ಆಶಾ ಕಾರ್ಯಕರ್ತೆಯರನ್ನು ನೇಮಕ ಮಾಡಲು ಉದ್ದೇಶಿಸಲಾಗಿದೆ. ಒಂದು ಬಾರಿ ಒಂದು ಮನೆಗೆ ಭೇಟಿ ನೀಡಿದರೆ ತಿಂಗಳಿಗೆ ಆಗುವಷ್ಟು ಔಷಧ ವಿತರಿಸಲಾಗುವುದು.
ಗೃಹ ಆರೋಗ್ಯವನ್ನು ಪ್ರಾಯೋಗಿಕವಾಗಿ 2024ರ ಅಕ್ಟೋಬರ್ ತಿಂಗಳಿನಲ್ಲಿ ಕೋಲಾರ ಜಿಲ್ಲೆಯಲ್ಲಿ ಪ್ರಾರಂಭಿಸಲಾಗಿದ್ದು ಅಲ್ಲಿ ಯೋಜನೆಗೆ ಉತ್ತಮ ಸ್ಪಂದನೆ ದೊರೆತ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈ ಯೋಜನೆಯನ್ನು ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ವಿಸ್ತರಿಸಲು ಮುಂದಾಗಿದೆ.
ಕರ್ನಾಟಕದ ಗೃಹ ಆರೋಗ್ಯ ಯೋಜನೆಯ ಮುಖ್ಯ ಉದ್ದೇಶವೆಂದರೆ ರೋಗಗಳನ್ನು ಶೀಘ್ರವಾಗಿ ಪತ್ತೆಹಚ್ಚಿ ಅಕಾಲಿಕ ಸಾವು ಮತ್ತು ಇತರ ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟುವ ಗುರಿಯನ್ನು ಹೊಂದಿದೆ. ಮಧುಮೇಹ, ಅಧಿಕ ರಕ್ತದೊತ್ತಡ, ಸ್ತನ, ಗರ್ಭಕಂಠ ಮತ್ತು ಬಾಯಿಯ ಕ್ಯಾನ್ಸರ್ ಮುಂತಾದ ಸಾಂಕ್ರಾಮಿಕವಲ್ಲದ ಕಾಯಿಲೆಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಪರೀಕ್ಷಿಸಲಾಗುತ್ತದೆ. ಈ ಯೋಜನೆಯು ಇತರ ಮಾನಸಿಕ ಆರೋಗ್ಯ ಪರಿಸ್ಥಿತಿಗಳ ರೋಗಲಕ್ಷಣಗಳನ್ನು ಸಹ ಪರಿಶೀಲಿಸುತ್ತದೆ.















































