
ಬೆಂಗಳೂರು: 2025ರ ಜೂನ್ 1 ರಿಂದ ನವೆಂಬರ್ 1 ರವರೆಗೆ ಸಕಲೇಶಪುರ – ಸುಬ್ರಹ್ಮಣ್ಯ ರೋಡ್ ಮಾರ್ಗದಲ್ಲಿ ಸುರಕ್ಷತೆ ಮತ್ತು ರೈಲ್ವೆ ವಿದ್ಯುದ್ದೀಕರಣ ಕಾಮಗಾರಿ ನಡೆಯಲಿರುವ ಕಾರಣ 2025ರ ಮೇ 31 ರಿಂದ ನವೆಂಬರ್ 1ರವರೆಗೆ ಶನಿವಾರದಂದು ಸಂಚರಿಸುವ ಯಶವಂತಪುರ-ಮಂಗಳೂರು ಜಂಕ್ಷನ್ ಸಾಪ್ತಾಹಿಕ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 16539) ಹಾಗೂ ಜೂನ್ 1 ರಿಂದ ನವೆಂಬರ್ 2 ರವರೆಗೆ ಭಾನುವಾರದಂದು ಸಂಚರಿಸುವ ಮಂಗಳೂರು ಜಂಕ್ಷನ್-ಯಶವಂತಪುರ ಸಾಪ್ತಾಹಿಕ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 16540) ತಾತ್ಕಾಲಿಕವಾಗಿ ರದ್ದುಪಡಿಸಲಾಗಿದೆ.
ಜೂನ್ 1 ರಿಂದ ಅಕ್ಟೋಬರ್ 30ರವರೆಗೆ ಮಂಗಳವಾರ, ಗುರುವಾರ ಮತ್ತು ಭಾನುವಾರಗಳಂದು ಸಂಚರಿಸುವ ಯಶವಂತಪುರ-ಮಂಗಳೂರು ಜಂಕ್ಷನ್ ಟ್ರೈ-ವೀಕ್ಲಿ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 16575), ಇದರ ಜೊತೆಗೆ, ಜೂನ್ 2ರಿಂದ ಅಕ್ಟೋಬರ್ 31ರವರೆಗೆ ಸೋಮವಾರ, ಬುಧವಾರ ಮತ್ತು ಶುಕ್ರವಾರಗಳಂದು ಸಂಚರಿಸುವ ಮಂಗಳೂರು-ಯಶವಂತಪುರ ಟ್ರೈ-ವೀಕ್ಲಿ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 16576) ಸಹ ರದ್ದಾಗಲಿದೆ.
ಇನ್ನು ಜೂನ್ 2 ರಿಂದ ಅಕ್ಟೋಬರ್ 31ರವರೆಗೆ ಸೋಮವಾರ, ಬುಧವಾರ ಮತ್ತು ಶುಕ್ರವಾರಗಳಂದು ಸಂಚರಿಸುವ ಯಶವಂತಪುರ-ಕಾರವಾರ ಟ್ರೈ-ವೀಕ್ಲಿ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 16515) ಹಾಗೂ ಜೂನ್ 3 ರಿಂದ ನವೆಂಬರ್ 1ರವರೆಗೆ ಮಂಗಳವಾರ, ಗುರುವಾರ ಮತ್ತು ಶನಿವಾರಗಳಂದು ಸಂಚರಿಸುವ ಕಾರವಾರ-ಯಶವಂತಪುರ ಟ್ರೈ-ವೀಕ್ಲಿ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 16516) ರೈಲುಗಳ ಸಂಚಾರವನ್ನು ಸಹ ರದ್ದುಗೊಳಿಸಲಾಗಿದೆ.
ನೈಋತ್ಯ ರೈಲ್ವೆಯ ಈ ನಿರ್ಧಾರವು ಗ್ರಾಹಕರು ಮತ್ತು ಪ್ರಯಾಣಿಕರ ಸಂಘಗಳನ್ನು ಚಿಂತೆಗೀಡು ಮಾಡಿದೆ.






