ಗುರುವಂದನೆ,ಅಭಿನಂದನೆ,ಸಂಗೀತ,ಸಾಹಿತ್ಯ ಸಂಭ್ರಮ

ರೆಂಜಾಳ:ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾಲಯ ಮತ್ತು ಐಲೇಸಾ ದಿ ವಾಯಿಸ್ ಆಫ್ ಓಷನ್(ರಿ) ಟೀಮ್ ರೆಂಜಾಳ – ಮುಂಬಯಿ ವತಿಯಿಂದ ರೆಂಜಾಳ ಗ್ರಾಮಸ್ಥರ ಸಹಕಾರದಲ್ಲಿ ನ. 3ರಂದು ಬೆಳಿಗ್ಗೆ 8 ಗಂಟೆಯಿಂದ ರೆಂಜಾಳ ಶಾಲಾ ವಠಾರದಲ್ಲಿ ಸಾಹಿತ್ಯ, ಸಂಗೀತ, ನೃತ್ಯ ಗುರುವಂದನೆ, ಅಭಿನಂದನೆ, ಸಾಧಕರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ, ಗ್ರಂಥ ಸಮರ್ಪಣೆ, ಬಿರುದು ಪ್ರದಾನ, ನಾಟಕ ಪ್ರದರ್ಶನವನ್ನೊಳಗೊಂಡ ಕುಸುಮೋತ್ಸವ ಕಾರ್ಯಕ್ರಮ ನಡೆಯಲಿದೆ.
ಕುಸುಮೋದರ ಗ್ರಂಥ ಲೋಕಾರ್ಪಣೆ
ಡಾ. ಅಶೋಕ ಆಳ್ವ ಗೌರವ ಸಂಪಾದಕರಾಗಿ ಹಾಗೂ ಡಾ. ದಿನೇಶ್ ಶೆಟ್ಟಿ ರೆಂಜಾಳ ಪ್ರಧಾನ ಸಂಪಾದಕತ್ವದ ಕುಸುಮೋದರ ಭವಾನಿಸುತನ ಆತ್ಮಾನುಗಾಥೆ ಲೋಕಾರ್ಪಣೆಗೊಳ್ಳಲಿದೆ.

ಬೆಳಿಗ್ಗೆ 8 ಗಂಟೆಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರಾರಂಭಗೊಳ್ಳಲಿದೆ. 8 ಗಂಟೆಗೆ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಿಂದ ವಿವಿಧ ಬಿರುದಾವಳಿಗಳೊಂದಿಗೆ ಸರಸ್ವತಿ ಮೆರವಣಿಗೆ ನಡೆಯಲಿದೆ. 9.30ಕ್ಕೆ ರೆಂಜಾಳ ಗ್ರಾಮಸ್ಥರ ಕೂಡುವಿಕೆಯಲ್ಲಿ ರೆಂಜಾಳ ಶಾಲಾ ವಠಾರದಲ್ಲಿ ಉದ್ಘಾಟನ ಸಮಾರಂಭ ನೆರವೇರಲಿದೆ. 10 ಗಂಟೆಯಿಂದ ಟೀಮ್ ಐಲೇಸಾದ ಪ್ರಸಿದ್ಧ ಕಲಾವಿದರಿಂದ ಸಂಗೀತ-ಸಾಹಿತ್ಯ ಮಕ್ಕಳಿಂದ ನೃತ್ಯ ವೈವಿಧ್ಯ 11 ಗಂಟಗೆ ಗುರುವಂದನೆ, 12.30 ಸ್ಯಾಕ್ರೋಫೋನ್ ವಾದನ, ಮಧ್ಯಾಹ್ನ 2 ಗಂಟೆಗೆ ಯಕ್ಷನೃತ್ಯ- ಸಂಗೀತ ವೈಭವ, ಸಂಜೆ 4 ಗಂಟೆಗೆ ಸಭಾ ಕಾರ್ಯಕ್ರಮ, ಗ್ರಂಥ ಬಿಡುಗಡೆ, ಸನ್ಮಾನ ಕಾರ್ಯಕ್ರಮ ನಡೆಯಲಿದ್ದು, 6.30ರಿಂದ ಲಕುಮಿ ತಂಡದವರಿಂದ ಒರಿಯಾಂಡಲಾ ಸರಿ ಬೋಡು ನಾಟಕ ಪ್ರದರ್ಶನಗೊಳ್ಳಲಿದೆ.
ಸಂಜೆ 4 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದ್ದು, ವಿಶ್ರಾಂತ ಕುಲಪತಿ, ಜಾನಪದ ವಿದ್ವಾಂಸ ಡಾ. ಕೆ. ಚಿನ್ನಪ್ಪ ಗೌಡ ಅಧ್ಯಕ್ಷತೆ ವಹಿಸಲಿದ್ದಾರೆ. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಅವರು ಕುಸುಮೋದರ ಗ್ರಂಥ ಬಿಡುಗಡೆ ಮಾಡಲಿದ್ದಾರೆ. ಮುಂಬಯಿ ಭವಾನಿ ಫೌಂಡೇಶನ್ ಟ್ರಸ್ಟ್ ಸಂಸ್ಥಾಪಕಾಧ್ಯಕ್ಷ ಕುಸುಮೋದರ ಡಿ. ಶೆಟ್ಟಿ ಅವರಿಗೆ ಗ್ರಂಥ ಸಮರ್ಪಣೆ ಹಾಗೂ ಅಭಿನಂದನೆ ನಡೆಯಲಿದೆ. ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಪ್ರಧಾನ ಅರ್ಚಕ ಕೆ. ವಿ. ರಾಘವೇಂದ್ರ ಉಪಾಧ್ಯಾಯ ಆಶೀರ್ವಚನ ನೀಡಲಿದ್ದಾರೆ. ರಂಗಕರ್ಮಿ ರಾಜೇಶ್ ರೆಂಜಾಳ ಅವರಿಗೆ ವಿಶೇಷ ಗುರುವಂದೆನೆ ನಡೆಯಲಿದೆ.
ಮುಂಬೈ ಸಾಧಕರುಗಳಾದ ಶೇಖರ್ ಶೆಟ್ಟಿ ಕಲ್ಲರಾಡಿ ಮುಂಬೈ, ಜಯ ಆರ್. ಶೆಟ್ಟಿ ರೆಂಜಾಳ ಪುಣೆ, ಗೋಪಾಲ್ ಹೆಗ್ಡೆ ಕಲ್ಯಾಣ್ ಮುಂಬೈ ಮತ್ತು ಯುವ ಉದ್ಯಮಿ ಅಮಿತ್ ಶೆಟ್ಟಿ ರೆಂಜಾಳ ಸಿಲ್ವಸ ಅವರನ್ನು ಸಮ್ಮಾನಿಸಲಾಗುವುದು
ಲೇಖಕ ಡಾ. ನರೇಂದ್ರ ರೈ ದೇರ್ಲ ಗ್ರಂಥ ಪರಿಚಯ ಮತ್ತು ಅಭಿನಂದನಾ ಭಾಷಣ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ರೆಂಜಾಳ ಶ್ರೀ ಮಹಾಮ್ಮಾಯಿ ದೇವಸ್ಥಾನದ ಆಡಳಿತ ಮೊಕ್ತಸರ ಬಿ. ಮಹಾವೀರ ಹೆಗ್ಡೆ ಬ್ರಾಣಬೆಟ್ಟು, ನವಿಮುಂಬಯಿ ಘನ್ನೋಲಿ ಶ್ರೀ ಮೂಕಾಂಬಿಕಾ ಮಂದಿರದ ಅಧ್ಯಕ್ಷ ಅಣ್ಣಿಸಿ. ಶೆಟ್ಟಿ, ಉದ್ಯಮಿ ರಘುವೀರ್ ಶೆಟ್ಟಿ ನಲ್ಲೂರು, ಪುಣೆ ಪಿಂಪ್ರಿ-ಚಿಂಕ್ವಾಡ್ ಬಂಟ್ಸ್ ಸಂಘದ ನಿಕಟಪೂರ್ವ ಅಧ್ಯಕ್ಷ ರಾಕೇಶ್ ಶೆಟ್ಟಿ ಬೆಳ್ಳಾರೆ, ನೋವೊ ನೊರ್ಡಿಸ್ಕ್ ಆಗ್ನೆಯ ಏಷ್ಯಾ ಸಿಂಗಾಪುರ ಇದರ ಮುಖ್ಯಸ್ಥ ಆನಂದ್ ಎಂ. ಶೆಟ್ಟಿ ನಲ್ಲೂರು, ಶ್ರೀ ಭುವನೇಂದ್ರ ಕಾಲೇಜು ಪ್ರಾಂಶುಪಾಲ ಮಂಜುನಾಥ ಕೋಟ್ಯಾನ್ ಸೇರಿದಂತೆ ಮೊದಲಾದವರು ಭಾಗಿಯಾಗಲಿದ್ದಾರೆ.


















