ಬಹಿರಂಗ ಹೇಳಿಕೆಯ ಬಗ್ಗೆ ಎಚ್ಚರಿಕೆ ನೀಡಿದ ರಣದೀಪ್ ಸಿಂಗ್ ಸುರ್ಜೆವಾಲ

ಬೆಂಗಳೂರು: ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣಧೀಪ್ ಸಿಂಗ್ ಸುರ್ಜೇವಾಲ ತಮ್ಮ ಎಕ್ಸ್ ಖಾತೆಯಲ್ಲಿ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಬಹಿರಂಗವಾಗಿ ಹೇಳಿಕೆಗಳನ್ನು ನೀಡುತ್ತಿರುವ ಪಕ್ಷದ ನಾಯಕರಿಗೆ ಎಚ್ಚರಿಕೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ರಾಜ್ಯದ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಜೊತೆ ಈ ಕುರಿತು ಮಾತನಾಡಿದ್ದು ಕರ್ನಾಟಕದ ಬಿಜೆಪಿ ಹಾಗೂ ಕೆಲ ಮಾಧ್ಯಮದವರು ರಾಜ್ಯ ಕಾಂಗ್ರೆಸ್ ಸರಕಾರ ಹಾಗೂ ಕರ್ನಾಟಕಕ್ಕೆ ಕೆಟ್ಟ ಹೆಸರು ತರಲು ಸಂಚು ರೂಪಿಸುತ್ತಿರುವ ಕುರಿತು ಉಭಯ ನಾಯಕರು ಒಪ್ಪಿಕೊಂಡಿದ್ದಾರೆ. ರಾಜ್ಯ ಸರ್ಕಾರದ ಸಾಧನೆ ಹಾಗೂ 5 ಗ್ಯಾರಂಟಿಗಳ ಯಶಸ್ಸನ್ನು ದುರ್ಬಲಗೊಳಿಸುವ ಏಕೈಕ ಉದ್ದೇಶದಿಂದ ಈ ಸಂಚು ರೂಪಿಸಲಾಗಿದೆ.
ಅದಲ್ಲದೆ ಕೆಲ ಕಾಂಗ್ರೆಸ್ ನಾಯಕರು ಹಾಗೂ ಶಾಸಕರು ನೀಡುತ್ತಿರುವ ಅನಗತ್ಯ ಹೇಳಿಕೆಗಳು ಗೊಂದಲ ಸೃಷ್ಟಿಗೆ ಕಾರಣವಾಗಿದ್ದು ಇದನ್ನು ಹೈಕಮಾಂಡ್ ಗಂಭೀರವಾಗಿ ಪರಿಗಣಿಸಿದೆ. ಹೀಗಾಗಿ ಪಟ್ಟಬದ್ರ ಹಿತಾಸಕ್ತಿಗಳ ಅಪಪ್ರಚಾರ, ಕಾರ್ಯಸೂಚಿಗೆ ಯಾರೊಬ್ಬರೂ ತುತ್ತಾಗಬಾರದು ಎಂದು ಎಚ್ಚರಿಸಿದ್ದೇವೆ ಎಂದು ಪೋಸ್ಟ್ ಹಂಚಿಕೊಂಡಿದ್ದಾರೆ.






















































